ದಾಂಡೇಲಿ: ನಗರದ ಸಮೀಪದಲ್ಲಿರುವ ಕೇರವಾಡದ ಶ್ರೇಯಸ್- ಶ್ರೀನಿಧಿ ಕಾರ್ಖಾನೆಯು ಕಳೆದೆರಡು ವರ್ಷಗಳಿಂದ ಉತ್ಪಾದನಾ ಚಟುವಟಿಕೆಯಿಲ್ಲದೆ ಸ್ಥಗಿತಗೊಂಡು ಕಾರ್ಖಾನೆಯ ಕಾರ್ಮಿಕರು ಅತ್ತ ವೇತನವೂ ಇಲ್ಲ, ಇತ್ತ ಪಿ.ಎಫ್, ಇ.ಎಸ್.ಐ ಸೌಲಭ್ಯದಿಂದಲೂ ವಂಚಿತರಾಗಿ ಅತ್ಯಂತ ದಯಾನೀಯ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ನಮಗೆ ನ್ಯಾಯ ನೀಡಿ, ಅರ್ಹವಾಗಿ ಸಿಗಬೇಕಾದ ವೇತನ, ಪಿಎಫ್, ಇ.ಎಸ್.ಐ ವಂತಿಗೆ ಹಣ ಭರಣ ಮಾಡಬೇಕು ಮತ್ತು ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಬಂದ ಹಣವನ್ನು ತ್ವರಿತಗತಿಯಲ್ಲಿ ನೀಡಬೇಕು. ಆದಷ್ಟು ಶೀಘ್ರ ಕಾರ್ಖಾನೆಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ, ಈಗಾಗಲೆ ಬರಲಿರುವ 2023 ರ ವಿಧಾನ ಸಭಾ ಚುನಾವಣೆಯನ್ನು ಕುಟುಂಬ ಸಮೇತರಾಗಿ ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಮತದಾನ ಬಹಿಷ್ಕಾರದ ನಿರ್ಧಾರವನ್ನು ಇನ್ನೂ ಹಿಂಪಡೆಯದ ಕಾರ್ಮಿಕರು ಹೋರಾಟದ ಹಾದಿ ತುಳಿಯುವ ಸಾಧ್ಯತೆ ಕಂಡುಬರುತ್ತಿದೆ. ಶ್ರೇಯಸ್ -ಶ್ರೀನಿಧಿ ಕಾರ್ಖಾನೆಯ ಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದ ಪಕ್ಷದಲ್ಲಿ ಹೋರಾಟ ಅನಿವಾರ್ಯ ಎಂದು ಬಿ.ಎಂ.ಎಸ್ ಸಂಘಟನೆಯ ಉಪಾಧ್ಯಕ್ಷರಾದ ಭರತ್ ಪಾಟೀಲ್ ತಿಳಿಸಿದ್ದಾರೆ.