ಶಿರಸಿ: ತಾಲೂಕಿನ ಕಲ್ಗಾರ್‌ಒಡ್ಡುನಲ್ಲಿ ನಡೆದ ಯಕ್ಷ ಗಾನವೈಭವ ಕಲಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಮೂರೂವರೆ ತಾಸು ಕಾಲ ನಡೆದ ಗಾನವ್ಯಭವ ಸೇರಿದ್ದ ನೂರಾರು ಕಲಾಭಿಮಾನಿಗಳು ತಲೆದೂಗುವಂತೆ ಮಾಡಿತು. ಪೆರ್ಡೂರು ಮೇಳದ ಪ್ರಧಾನ ಭಾಗವತ, ಬಡಗುತಿಟ್ಟಿನ ಕಲಾವಿದ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗು ತೆಂಕುತಿಟ್ಟಿನ ಕಲಾವಿದೆ ಅಮೃತಾ ಅಡಿಗ ಸುಮಧುರವಾಗಿ ಯಕ್ಷ ಗಾನವನ್ನು ಹಾಡುವ ಮೂಲಕ ಮನರಂಜಿಸಿದರು.
ಗಣಪತಿ ಸ್ತುತಿಯೊಂದಿಗೆ ಆರಂಭಿಸಿ ಮಾಯಾ ಮೃಗವತಿ, ಪಾಪಣ್ಣ ವಿಜಯ, ಕಂಸವಧೆ ಹೀಗೆ ಅನೇಕ ಪೌರಾಣಿಕ ಮತ್ತು ಸಾಮಾಜಿಕ ಪ್ರಸಂಗದ ಆಯ್ದ ಪದಗಳನ್ನು ಸುಮಾರು ಹಾಡಿ ರಸದೌತಣ ನೀಡಿದರು.
ಮುಖ್ಯವಾಗಿ ಜಲಜಾಕ್ಷಿಯೇ ಬಾ., ಸೊಬಗಿನ ಸೆರೆಮನೆ ಆಗಿಯೇ ನೀನು ಚೆಲುವೆ ಸರಸ್ವತೀಯೇ, ಹಣೆಗೆ ತಿಲಕ ಇಡಲು, ನಮೋ ನಮೋ ಪರಮೇಶ, ಕಾಪಾಡು ಶ್ರೀ ಸತ್ಯನಾರಾಯಣ., ಪಿಳ್ಳಂಗೋವಿಯ ಚೆಲುವ ಕೃಷ್ಣನ ಮುಂತಾದ ಹಾಡುಗಳನ್ನು ಭಾವ ತುಂಬಿ ಹಾಡಿ ಮನತಟ್ಟಿದರು.
ಮದ್ದಲೆಯಲ್ಲಿ ಸುನಿಲ್ ಭಂಡಾರಿ, ಮಯೂರ್ ನಾಯ್ಕ, ಚಂಡೆಯಲ್ಲಿ ಗಣೇಶ ಗಾಂವ್ಕರ್, ರೋಹಿತ್ ಉಚ್ಚಲ್. ಚಕ್ರತಾಳದಲ್ಲಿ
ರಂಜಿತ್ ಈಶ್ವರಮಂಗಲ ಸಾಥ್ ನೀಡಿದರು. ಸ್ಪಂದನಾ ಹುತ್ಗಾರ್ ಪ್ರಾರ್ಥಿಸಿದರು. ನಾಗರಾಜ ಹೆಗಡೆ ಕವಲಕ್ಕಿ ನಿರೂಪಿಸಿದರು.