ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ನಿಧಾನವಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿದೆ. ಸಿನಿಮಾಗಳೇ ಪ್ರದರ್ಶನ ಕಾಣದ ಅಲ್ಲಿ ಈಗ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಮಾತ್ರವಲ್ಲ ಬರೋಬ್ಬರಿ 33 ವರ್ಷಗಳ ಬಳಿಕ ಅಲ್ಲಿನ ಬೀದಿಗಳಲ್ಲಿ ಸಿನಿಮಾ ಪೋಸ್ಟರ್ಗಳು ರಾರಾಜಿಸುತ್ತಿವೆ. ಯಾವುದೇ ಒಂದು ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಪೋಸ್ಟರ್ ಗಳನ್ನು ಹಾಕಿ ಪ್ರಚಾರ ನಡೆಸುವುದು ಸರ್ವೇ ಸಾಮಾನ್ಯವಾದರೂ ಶ್ರೀನಗರಕ್ಕೆ ಹೊಸದಾಗಿದೆ.
1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಉಗ್ರಗಾಮಿಗಳ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿನಿಮಾ ಪೋಸ್ಟರ್ಗಳು ಕಾಣಿಸಿಯೇ ಇಲ್ಲ. ಇದೀಗ ಹಿಂದಿ ಸಿನಿಮಾ ಭೋಲಾದೊಂದಿಗೆ ಪೋಸ್ಟರ್ ಮತ್ತೆ ಅಲ್ಲಿ ಕಾಲಿಟ್ಟಿದೆ. ದಾಲ್ ಸರೋವರದ ಬೌಲೆವಾರ್ಡ್ ರಸ್ತೆಯಲ್ಲಿ, ಪ್ರವಾಸಿ ಸ್ವಾಗತ ಕೇಂದ್ರದ ಬಳಿ ಮತ್ತು ಶ್ರೀನಗರದ ಅಪ್ಟೌನ್ನಲ್ಲಿರುವ ಇತರ ಪ್ರದೇಶಗಳಲ್ಲಿ ಪೋಸ್ಟರ್ ಗಳನ್ನು ಹಾಕಲಾಗಿದೆ.
ಬೌಲೆವಾರ್ಡ್ ರಸ್ತೆಯು ಪ್ರವಾಸಿ ಚಟುವಟಿಕೆಯ ತಾಣ. ಕಳೆದ ಸೆಪ್ಟೆಂಬರ್ನಲ್ಲಿ ತೆರೆಕಂಡ INOX ಮಲ್ಟಿಪ್ಲೆಕ್ಸ್ನಲ್ಲಿ ಭೋಲಾ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, 33 ವರ್ಷಗಳ ನಂತರ ಮತ್ತೆ ಕಾಶ್ಮೀರದಲ್ಲಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.