ಶಿರಸಿ: ಕಾಡಿನ ಪ್ರದೇಶದ ಅಕೇಶಿಯಾ ಮರಗಳ ಕಡಿತ ಹಾಗೂ ಕಟಾವ್ ಮಾಡುವಾಗ ಮಾಡಿದ ಎಡವಟ್ಟಿನಿಂದ ಬರಲಿರುವ ಮಳೆಗಾಲದಲ್ಲಿ ರಸ್ತೆ ಸಂಚಾರಕ್ಕೆ ಇನ್ನಷ್ಟು ಸಮಸ್ಯೆ ಆಗಲಿದ್ದು, ತಕ್ಷಣ ಇದು ಸರಿ ಮಾಡಿಕೊಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡ ಘಟನೆ ನಡೆದಿದೆ.
ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಗಡಿಯ ಹಳ್ಳಿಕಾನ, ಅರಸಗೋಡ, ಗಿರಗಡ್ಡೆ, ಬಿಸಲಕೊಪ್ಪ ಭಾಗದ ಅಕೇಶಿಯಾ ಮರಗಳನ್ನು ಕಡಿಯಲಾಗಿತ್ತು. ಈಮರ ಕಡಿಯುವಾಗ ಜೆಸಿಬಿ ಬಳಸಲಾಗಿದೆ. ಟ್ರಕ್ ಕಾಡೊಳಗೇ ಒಯ್ಯಲು ರಸ್ತೆ ಮಾಡಲಾಗಿದೆ. ಇದರಿಂದ ಚರಂಡಿ ಮುಚ್ಚಿ ಹೋಗಿವೆ. ಅಕೇಶಿಯಾ ಟೊಂಗೆಗಳೂ ರಸ್ತೆ ಪಕ್ಕದ ಗಟಾರದಲ್ಲಿ ಬಿದ್ದಿದ್ದು ಅದರಿಂದ ಮಳೆ ಬಂದರೆ ನೀರಷ್ಟೂ ರಸ್ತೆಯ ಮೇಲೆ ಹೋಗಲಿವೆ.
ಇದರಿಂದ ನಿತ್ಯ ನೂರಾರು ಜನರು ಸಂಚರಿಸುವ ಮಾರ್ಗ ಇನ್ನಷ್ಟು ದುಃಸ್ತಿತಿಗೆ ಒಳಗಾಗಲಿದೆ ಎಂದು ಅರಸಗೋಡ, ಹಳ್ಳಿಕಾನ ಗ್ರಾಮಸ್ಥರು ಆತಂಕಿಸಿದ್ದಾರೆ. ಇಲಾಖೆಯ ಕಾರಣದಿಂದ ಹಾಳಾದ, ಹಾಳಾಗಲಿರುವ ರಸ್ತೆಯನ್ನು ದುರಸ್ತಿ ಮಾಡಿಕೊಡಲು ಕೋರುತ್ತೇವೆ ಎಂದೂ ಮನವಿ ಮಾಡಿದ್ದಾರೆ. ಇನ್ನು ಹೊಸತಾಗಿ ಗಿಡ ನೆಡಲು ಕುಳಿ ತೋಡಲಾಗಿದೆ. ಮತ್ತೆ ಅಕೇಶಿಯಾ ನೆಡಬಾರದು ಎಂದೂ ಆಗ್ರಹಿಸಿದ್ದಾರೆ.