ಅಂಕೋಲಾ: ಅಂಬೇಡ್ಕರ ಅವರ ಬದುಕು ಕೇವಲ ಪ್ರದರ್ಶನವಾಗಿರದೇ ಜಗತ್ತಿಗೆ ನೀಡಿದ ನಿದರ್ಶನವಾಗಿದೆ. ಹಾಗಾಗಿ ಅವರ ಸದಾ ನೆನೆಯುವ ವ್ಯಕ್ತಿ ಆಗಿದ್ದಾರೆ. ಅಂಬೇಡ್ಕರ ಕೇವಲ ಸಂವಿಧಾನ ರಚಿಸದೇ ದೇಶವೇ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಹಾಗೂ ಗೌರವಯುತ ಸಮಾನತೆಯನ್ನು ತಿಳಿಸಿದ ಶ್ರೇಷ್ಠವ್ಯಕ್ತಿ ಆಗಿದ್ದಾರೆ ಎಂದು ಶಿಕ್ಷಕರಾದ ಜಯಶೀಲ ಆಗೇರ ಹೇಳಿದರು.
ಅವರು ಸ್ಥಳೀಯ ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ 132ನೇ ಡಾ.ಬಿ.ಆರ್. ಅಂಬೇಡ್ಕರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಜಿ.ಹೆಗಡೆ ಅವರು ಡಾ.ಬಿ.ಆರ್.ಅಂಬೇಡ್ಕರ ಪ್ರಪಂಚ ಶ್ರೇಷ್ಠ ಜ್ಞಾನದ ದೀಪವಾಗಿದ್ದರೂ ಕೇವಲ ಜಾತಿಗೆ ಸೀಮಿತರಾಗುತ್ತಿರುವದು ದುರಂತವಾಗಿದೆ ಹಾಗೂ ಅಂಬೇಡ್ಕರ ಅವರ ಸಂವಿಧಾನಿಕ ಆಶಯವನ್ನು ಈಡೇರಿಸಿ ದಮನಿತರನ್ನು ಇನ್ನುವರೆಗೆ ಮೇಲ್ದರ್ಜೆಗೆ ತರಲು ಸಾಧ್ಯವಾಗಿಲ್ಲದೇ ಇರುವದು ಶೋಚನೀಯ ಎಂದರು.
ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಗೌಡ ಸಂಗಡಿಗರು ಪ್ರಾರ್ಥಿಸಿದರು, ಸಮಾಜವಿಜ್ಞಾನ ಸಂಘದ ಉಪಾದ್ಯಕ್ಷೆ ಡಾ. ಪುಷ್ಪಾ ನಾಯ್ಕ ಸ್ವಾಗತಿಸಿ ಪರಿಚಯಿಸಿದರು. ಅಂಬೇಡ್ಕರ ಜೀವನ ಮತ್ತು ಶಿಕ್ಷಣದ ಮೇಲೆ ತಾರಾ ಗೌಡ, ಅಂಬೇಡ್ಕರ ಶೈಕ್ಷಣಿಕ ಸಾಧನೆಯ ಮೇಲೆ ಚೈತ್ರಾ ಆಚಾರಿ ಮಾತನಾಡಿದರು. ಸಮಾಜ ವಿಜ್ಞಾನ ಸಂಘದ ಕಾರ್ಯದರ್ಶಿ ಸೂರಜ ಐಮನ್ ವಂದಿಸಿದರು. ಸಂಧ್ಯಾ ನಾಯಕ ನಿರೂಪಿಸಿದರು.