ಅಂಕೋಲಾ: ಯುವ ಪೀಳಿಗೆಯವರಿಗೆ ನಮ್ಮ ಹಿಂದಿನ ಇತಿಹಾಸ ತಿಳಿಸದಿದ್ದರೆ ಅದು ನಾವು ಮಾಡಿದ ಬಹುದೊಡ್ಡ ದ್ರೋಹವಾಗುತ್ತದೆ. ಅಂದು ಬ್ರಿಟಿಷರು ಉಪ್ಪಿಗೆ ವಿಧಿಸಿದ ಕರವನ್ನು ನಿರಾಕರಿಸಿ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಹಮ್ಮಿಕೊಂಡು ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಈಗ ಇದರ 93 ನೇ ಹೊಸ ಆಚರಣೆಯ ನಿಮಿತ್ತ ಪೂಜಗೇರಿ ಹಳ್ಳಕ್ಕೆ ಬಾಗೀನ ಅರ್ಪಿಸಿರುವುದು ನನ್ನ ಸೌಭಾಗ್ಯ ಎಂದು ಹಿರಿಯ ಸಾಹಿತಿ ಡಾ.ರಾಮಕೃಷ್ಣ ಗುಂದಿ ಹೇಳಿದರು.
ಕಡಲು ಪ್ರಕಾಶನ ಮಂಜಗುಣಿ ನೇತೃತ್ವದಲ್ಲಿ ಹಮ್ಮಿಕೊಂಡ ಉಪ್ಪಿನ ಸತ್ಯಾಗ್ರಹದ 93ನೇ ವರ್ಷದ ನೆನಪಿಗಾಗಿ ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆರೆ- ಕಟ್ಟೆಗಳು ತುಂಬಿದಾಗ ನದಿಗಳು ತುಂಬಿ ಹರಿಯುವಾಗ ಅವುಗಳನ್ನು ಹೆಣ್ಣಿನ ರೂಪದಲ್ಲಿ ನೋಡಿ ಬಾಗೀನ ಅರ್ಪಿಸುವ ಸಂಪ್ರದಾಯ ನಮ್ಮಲ್ಲಿದೆ. ಅಂದು ಇದೇ ಹಳ್ಳದ ನೀರನ್ನು ತೆಗೆದುಕೊಂಡು ಹೋಗಿ ಉಪ್ಪನ್ನು ಸಿದ್ಧಪಡಿಸಿದ್ದರು. ಹೀಗಾಗಿ ಈ ಪೂಜಗೇರಿ ಹಳ್ಳಕ್ಕೆ ಬಾಗಿನ ಅರ್ಪಿಸಿರುವುದು ಅರ್ಥಪೂರ್ಣವಾದದ್ದು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ ಮಾತನಾಡಿ, ಕಳೆದ 8 ವರ್ಷಗಳಿಂದ ಬಾಗಿನ ಅರ್ಪಿಸುವ ಕಾರ್ಯ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಮುಂದೆಯೂ ಕೂಡ ಇದನ್ನು ಮುನ್ನಡೆಸಿಕೊಂಡು ಹೋಗುವುದರ ಜತೆಗೆ ಮುಂದಿನ ಯುವಪೀಳಿಗೆಗೆ ಇದರ ಮಹತ್ವ ಸಾರುವಂತೆ ಮಾಡುತ್ತೇವೆ ಎಂದರು.
ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ ಮಾತನಾಡಿ, ಮೊದಲು ನಾವು ಇತಿಹಾಸವನ್ನು ತಿಳಿದುಕೊಳ್ಳಬೇಕು. ನಮ್ಮ ಹಿರಿಯರ ನಿರಂತರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರö್ಯ ಲಭಿಸಿದೆ. ಆ ಹೋರಾಟದ ವಿವಿಧ ಆಯಾಮಗಳನ್ನು ಇಂದಿನ ಪೀಳಿಗೆಯವರು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ನಮ್ಮ ತಂದೆ ಕೂಡ ಸ್ವತಂತ್ರ ಯೋಧರಾಗಿದ್ದರು. ಹೀಗಾಗಿ ಸ್ವಾತಂತ್ರ್ಯ ಹೋರಾಟ ಚಳುವಳಿಗೆ ಸಂಬಂಧಿಸಿದಂತೆ ಅಂಕೋಲಾದಲ್ಲಿ ನಡೆದ ವಿವಿಧ ಹೋರಾಟಗಳನ್ನು ಯುವಜನತೆಗೆ ತೆರೆದಿಡಬೇಕಾಗಿದೆ ಎಂದರು.
ಕಡಲು ಪ್ರಕಾಶನದ ಸಂಚಾಲಕ ನಾಗರಾಜ ಮಂಜಗುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ ವಂದಿಸಿದರು. ವಕೀಲ ಉಮೇಶ ನಾಯ್ಕ, ಜಿಲ್ಲಾ ನಾಗರಿಕ ವೇದಿಕೆ ಅಧ್ಯಕ್ಷ ಶ್ರೀಪಾದ ಟಿ.ನಾಯ್ಕ ಮಾತನಾಡಿದರು. ವರದಿಗಾರ ವಿಲಾಸ ನಾಯಕ, ನಾಗರಾಜ ಶೆಟ್ಟಿ, ಪ್ರಮುಖರಾದ ಸಂದೀಪ ಬಿ. ಉಪಸ್ಥಿತರಿದ್ದರು.