ಶಿರಸಿ: ನನಗೆ ಮತ್ತು ನನ್ನ ವೈಯಕ್ತಿಕ ವರ್ಚಸ್ಸಿಗೆ ಅವಮಾನ ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ಹಿತೇಂದ್ರ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಯು ಸಮಾಜಕ್ಕೆ ತನ್ನ ಸ್ವಂತ ದುಡಿಮೆಯಿಂದ ಮಾಡಿರುವ ಕೆಲಸದ ಬಗ್ಗೆ ಹೇಳಿಕೊಂಡರೆ ಅದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ. ಮತದಾರರು ಅಭ್ಯರ್ಥಿಗೆ ಮತ ಹಾಕುವುದು ಅವನ ಕೆಲಸ ಕಾರ್ಯ ನೋಡಿಯೇ ಅಲ್ಲವೇ? ನಾವು ಮಾಡಿರುವ ಕೆಲಸ ಡಿಸೆಂಬರ್ 25ರಂದು. ಅದು ಕೂಡ ವೈಯಕ್ತಿಕ ಕೆಲಸವಾಗಿದೆ. ಯಾವುದೇ ಸರ್ಕಾರಿ ಅಥವಾ ಅರೆಸರ್ಕಾರಿ ಕೆಲಸವಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಸಮಾಜ ಸೇವೆಯ ಕೆಲಸ ನಾವು ಮಾಡಿಲ್ಲ. ಅಂದು ಮಾಡಿದ ಕೆಲಸದ ಪೋಸ್ಟ್ ಇಂದು ಹಾಕಬಾರದೆ? ಎಂದು ಪ್ರಶ್ನಿಸಿದ್ದಾರೆ.
ಆಮ್ ಆದ್ಮಿ ಪಕ್ಷವೇ ನನ್ನನ್ನು ಅಭ್ಯರ್ಥಿ ಎಂದು ಘೋಷಿಸಿದ್ದು, ರಾಜಕೀಯವಾಗಿ ನನ್ನನ್ನು ಕುಗ್ಗಿಸುವ ಪ್ರಯತ್ನದಲ್ಲಿ ಕೆಲವರು ನಿರತರಾಗಿದ್ದಾರೆ. ಇದರ ಹಿಂದೆ ಯಾರೇ ಇದ್ದರೂ ತಲೆಕೆಡಿಸಿಕೊಳ್ಳುವ ಮಾತೇ ಇಲ್ಲ. ಯಾವುದಕ್ಕೂ ಕುಗ್ಗುವವನು ನಾನಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.