ದಾಂಡೇಲಿ: ನಗರದ ಭಾರತೀಯ ಸಂಗೀತ ವಿದ್ಯಾಲಯದ 25ನೇ ವರ್ಷದ ನಿಮಿತ್ತವಾಗಿ ಟೌನ್‌ಶಿಪ್‌ನ ಶ್ರೀಶಂಕರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಶನಿವಾರ ಜರುಗಿತು.
ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಸಂದೇಶ್ ಎಸ್.ಜೈನ್, ಭಾರತೀಯ ಸಂಗೀತ ವಿದ್ಯಾಲಯವು ನಗರದ ಮಕ್ಕಳ ಕಲಾ ಪ್ರತಿಭೆಗಳನ್ನು ಬೆಳೆಸಿ, ಪ್ರೋತ್ಸಾಹಿಸುವ ಕರ‍್ಯವನ್ನು ನಿಷ್ಟೆಯಿಂದ ಮಾಡುತ್ತಾ ಬರುತ್ತಿದೆ. ತನ್ನೆಲ್ಲ ಬದುಕಿನ ಕಷ್ಟಗಳೆಲ್ಲವನ್ನು ನುಂಗಿಕೊoಡು ಇನ್ನೊಬ್ಬರಲ್ಲಿರುವ ಕಲೆಯನ್ನು ಗುರುತಿಸಿ, ಬೆಳೆಸುವ ಪಂ.ಚ0ದ್ರಶೇಖರ್.ಎಸ್ ಅವರ ಕಲಾಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಶಾಸ್ತ್ರೀಯ ಸಂಗೀತ, ಭರತನಾಟ್ಯದಂತಹ ಕಲೆಯಲ್ಲಿ ಆಸಕ್ತಿ ಹೊಂದಿರುವವರು ಮತ್ತು ಅದರಲ್ಲಿ ತೊಡಗಿಕೊಂಡಿರುವವರು ಸದೃಢ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿಯಾಗಬಲ್ಲರು. ಕಲೆ, ಸಂಸ್ಕೃತಿ ನಮ್ಮ ನಮ್ಮ ವ್ಯಕ್ತಿತ್ವಕ್ಕೆ ಆದರ್ಶ ಸಂಸ್ಕಾರವನ್ನು ನೀಡಬಲ್ಲುದು. ಆದರ್ಶ ಸಂಸ್ಕಾರಯುತವಾದ ವ್ಯಕ್ತಿಯಿಂದ ಉತ್ತಮ ಸಮಾಜ ನಿರ್ಮಾಣವಾಗಬಲ್ಲುದು. ಈ ನಿಟ್ಟಿನಲ್ಲಿ ಭಾರತೀಯ ಸಂಗೀತ ವಿದ್ಯಾಲಯ ಹಮ್ಮಿಕೊಂಡ ಉಚಿತ ಸಂಗೀತ ತರಬೇತಿ ಶಿಬಿರ ಇದು ಇಲ್ಲಿಯ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಮುಖ್ಯಭೂಮಿಕೆಗೆ ತರಲು ಸಹಕಾರಿಯಾಗಲಿದೆ ಎಂದರು.
ಸುಗoಧ ಮರಿಯಾ ಕ್ರಿಸ್ತರಾಜ್ ಮಾತನಾಡುತ್ತಾ, ಭಾರತೀಯ ಸಂಗೀತ ವಿದ್ಯಾಲಯದ ಕಲಾಸೇವೆ ಸದಾ ಸ್ಮರಣೀಯ. ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿದೆ. ಮಕ್ಕಳು ಶಿಕ್ಷಣದ ಜೊತೆಗೆ ಕಲೆ, ಸಂಸ್ಕೃತಿಯ ಕಡೆಗೆ ಹೆಚ್ಚಿನ ಒತ್ತು ನೀಡಿದಾಗ ಉಜ್ವಲ ಭವಿಷ್ಯ ನಿರ್ಮಾಣವಾಗಬಲ್ಲುದು. ಈ ನಿಟ್ಟಿನಲ್ಲಿ ಮಕ್ಕಳ ಪಾಲಕರು ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಬೇಕೆಂದರು.
ಭಾರತೀಯ ಸಂಗೀತ ವಿದ್ಯಾಲಯದ ಪ್ರವರ್ತಕರಾದ ಪಂ.ಚ0ದ್ರಶೇಖರ್.ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 25 ವರ್ಷಗಳಿಂದ ಭಾರತೀಯ ಸಂಗೀತ ವಿದ್ಯಾಲಯ ಬೆಳದು ಬಂದ ಹಾದಿಯನ್ನು ವಿವರಿಸಿ, ಸರ್ವರ ಸಹಕಾರವಿದ್ದಾಗ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ ಎಂದರು. ಕಲೆ ಒಬ್ಬರ ಸ್ವತ್ತಲ್ಲ. ಅದು ಎಲ್ಲರ ಆಸ್ತಿಯಾಗಬೇಕು. ಆಗ ಮಾತ್ರ ಕಲೆ ಉಳಿಯಲು ಮತ್ತು ಬೆಳೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಸಂದೇಶ್.ಎಸ್.ಜೈನ್ ಮತ್ತು ಸುಗಂಧ ಮರಿಯಾ ಕ್ರಿಸ್ತರಾಜ್ ಅವರನ್ನು ಭಾರತೀಯ ಸಂಗೀತ ವಿದ್ಯಾಲಯದಿಂದ ಸನ್ಮಾನಿಸಲಾಯಿತು. ಕೊಳಲುವಾದಕ ಜೈತ್ ಸಿ.ಎಸ್. ಸ್ವಾಗತಿಸಿದ ಕರ‍್ಯಕ್ರಮಕ್ಕೆ ಮಾಲಾ ಚಂದ್ರಶೇಖರ್ ವಂದಿಸಿದರು. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.