ಅಂಕೋಲಾ: ಜೇಸಿ ಶಿಕ್ಷಣ ಸಂಸ್ಥೆ ಆರಂಭದ ದಿನದಿಂದ ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಪುಟ್ಟ ಪ್ರತಿಭೆಗಳಿಗೆ ವಿನೂತನ ಪ್ರಯೋಗದ ಮೂಲಕ ಅವರ ಬುದ್ಧಿಮತ್ತೆ ಚುರುಕಾಗಿಸುವ ಇಂತಹ ಕಲಿಕಾ ಚಟುವಟಿಕಾ ಪ್ರಯೋಗಗಳು ಇಂದಿನ ದಿನದಲ್ಲಿ ಅಗತ್ಯ ಎಂದು ಪತ್ರಕರ್ತ ಸುಭಾಷ್ ಕಾರೇಬೈಲ ಹೇಳಿದರು.
ಅವರು ತಾಲೂಕಿನ ಜೇಸೀ ಬಾಲವನ ಕೆ.ಜಿ.ಸ್ಕೂಲ್ ಹಾಗೂ ಹೊಟೆಲ್ ಕಾಮತ್ ಪ್ಲಸ್ ಸಂಯುಕ್ತ ಆಶ್ರಯದಲ್ಲಿ ಕಾಮತ್ ಪ್ಲಸ್ ಸಭಾಭವನದಲ್ಲಿ 3ರಿಂದ 5 ವರ್ಷದ ಮಕ್ಕಳಿಗಾಗಿ ಚಿಣ್ಣರ ಒಲಂಪಿಕ್ಸ್ ಎಂಬ ವಿನೂತನ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಅವರಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಲು ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದರು.
ಅವರ್ಸಾ ಎಜ್ಯುಕೇಶನ್ ಮತ್ತು ವೆಲ್ಫೇರ್ ಅಸೋಸಿಯೇಶನ್ ಕಾರ್ಯದರ್ಶಿ ಲತಾ ಕಾಮತ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಕಲಿಕೆ ಎನ್ನುವದು ಹೊರೆಯಾಗಬಾರದು. ಆಟವಾಡುತ್ತ ಮಕ್ಕಳ ಕಲಿಕೆಯಲ್ಲಿ ಉತ್ಸಾಹ ತುಂಬಬೇಕು ಎಂಬ ಚಿಂತನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜೇಸೀ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಮಂಜುಳಾ ನಾಯ್ಕ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಾಧ್ಯಾಪಕ ರಾಘವೇಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಚಂದ್ರಪ್ರಭಾ ಕೇಣಿ ಸ್ವಾಗತಿಸಿದರು. ಜೇಸೀ ಬಾಲವನ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ವರ್ಷಾ ಹಾರವಾಡೇಕರ, ಅವರ್ಸಾದ ರಾಧಾಬಾಯಿ ಕೆಜಿ ಸ್ಕೂಲ್ನ ಮುಖ್ಯಾಧ್ಯಾಪಕಿ ಶಿಲ್ಪಾ ನಾಯ್ಕ, ಶಿಕ್ಷಕಿಯರಾದ ಶೀಲಾ ತಾಂಡೇಲ, ಅರ್ಪಿತಾ ನಾಯ್ಕ, ಅಶ್ವಿನಿ ನಾಯ್ಕ, ಸಹನಾ ನಾಯ್ಕ, ಶೃದ್ಧಾ ಎಚ್., ಪವಿತ್ರಾ ನಾಯ್ಕ, ಪ್ರತಿಕ್ಷಾ ಎಚ್., ಸತೀಶ ನಾಯ್ಕ, ಮಂಜು ಶೆಡಗೇರಿ, ಸಚಿತಾ ನಾಯ್ಕ, ಅಶ್ವಿನಿ ಪೈ, ಅನುಜಾ ನಾಯ್ಕ ಇದ್ದರು.