ಶಿರಸಿ: ಇಲ್ಲಿನ ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ಡಾ.ಎ.ಎನ್.ಪಟವರ್ಧನ್ ಫೌಂಡೇಶನ್, ಐ.ಎಮ್.ಎ.ಮಹಿಳಾ ಘಟಕ ಮತ್ತು ಶ್ರೀ ಲಕ್ಷ್ಮಿನರಸಿಂಹ ಮಹಿಳಾ ಸ್ವ ಸಹಾಯ ಸಂಘ ಕಕ್ಕಳ್ಳಿಯ ಸಂಯುಕ್ತಾಶ್ರಯದಲ್ಲಿ ಕಕ್ಕಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಸುಮತಿ ಮತ್ತು ಸಂಗಡಿಗರಿಂದ ನಡೆದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಾಂತಲಾ ವೈದ್ಯರು ಎಲ್ಲರನ್ನೂ ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಣೇಶ ಪ್ರಸಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ಸ ಕ್ಲಬ್ ಕಾರ್ಯದರ್ಶಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐ.ಎಮ್.ಎ.ಮಹಿಳಾ ಘಟಕದ ಅಧ್ಯಕ್ಷೆ ಡಾ.ಶಾಂತಾ ಭಟ್ಟ, ಮಹಿಳೆಯರನ್ನು ಬಹುವಾಗಿ ಕಾಡುವ ಋತುಬಂಧದ ಬಗ್ಗೆ ತಿಳಿಸಿ ಆ ಸಮಯದಲ್ಲಿ ದೈಹಿಕ, ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಡಾ.ಆಶಾ ಪ್ರಭು ಮಹಿಳೆಯರಿಗೆ ಬರುವ ಕ್ಯಾನ್ಸರಿನ ವಿವಿಧ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಜಾಸ್ತಿಯಾಗುತ್ತಿದ್ದು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು. ಶುಭಮಂಗಳಾ ಹೆಗಡೆಯವರು ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಲಯನ್ ಸುಮಂಗಲಾ ಹೆಗಡೆಯವರು ವಂದನಾರ್ಪಣೆ ಮಾಡಿದರು. ಸ್ವ ಸಹಾಯ ಸಂಘದ ಅಧ್ಯಕ್ಷೆ ಪ್ರೇಮಾ ಹೆಗಡೆ ಉಪಸ್ಥಿತರಿದ್ದರು. ದೂರ ದೂರದ ಮನೆಗಳಿಂದ ಮಹಿಳೆಯರು ಬಂದು ಕಾರ್ಯಕ್ರಮದ ಉಪಯೋಗವನ್ನು ತೆಗೆದುಕೊಂಡಿದ್ದು ವಿಶೇಷವಾಗಿತ್ತು.