ಯಲ್ಲಾಪುರ: ಪಟ್ಟಣ ಪಂಚಾಯತಿಯಲ್ಲಿ ನೀರಿನ ಕರ ಮತ್ತು ಮನೆಯ ಕರವನ್ನು ಏರಿಸಲಾಗಿದೆ. ಈ ಕರಗಳನ್ನು ಕಡಿಮೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಗರ ಘಟಕ ಹಾಗೂ ಪ.ಪಂ ಕಾಂಗ್ರೆಸ್ ಸದಸ್ಯರು ಶನಿವಾರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಏರಿಸಿರುವ ಮನೆ ಕರ ಮತ್ತು ನೀರಿನ ಕರ ಕಡಿಮೆ ಮಾಡುವ ಕುರಿತು ಮನವಿಯಲ್ಲಿ ಪ್ರಸ್ತಾಪಿಸಿದ್ದು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನಸಾಮಾನ್ಯರ ಜೀವನಕ್ಕೆ ಅಗತ್ಯವಿರುವ ವಸ್ತುಗಳ ಬೆಲೆಯನ್ನು ಹಲವು ವರ್ಷಗಳಿಂದ ಏರಿಕೆ ಮಾಡುತ್ತಾ ಬಂದಿದ್ದಾರೆ. ಜನಸಾಮಾನ್ಯರು ದಿನನಿತ್ಯ ಬಳಸುವ ಅಡಿಗೆ ಅನಿಲ, ವಿದ್ಯುತ್ ಶುಲ್ಕ, ಮನೆ ನಿರ್ಮಿಸಲು ಬೇಕಾಗಿರುವ ಸಾಮಗ್ರಿಗಳಾದ ಜಲ್ಲಿ ಕಲ್ಲುಗಳು, ಮರುಳು, ಕಬ್ಬಿಣ, ಬಸ್ ದರ ಹಾಗೂ ಪೆಟ್ರೋಲ್- ಡೀಸೆಲ್ಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಕೆಲವು ದಿನಗಳ ಹಿಂದಿನಿಂದ ಹಾಲಿನ ದರವನ್ನು ಕೂಡ ಏರಿಕೆ ಮಾಡಲಾಗಿದೆ. ಜನ ಸಾಮಾನ್ಯರು ಆದಾಯಕ್ಕಿಂತ ವೆಚ್ಚವೇ ಅಧಿಕವಾಗುವ ಸನ್ನಿವೇಶವನ್ನು ಬಿಜೆಪಿ ಸರ್ಕಾರ ಸೃಷ್ಟಿಸಿದೆ. ಬೆಲೆ ಏರಿಕೆ ತೆರಿಗೆ ಏರಿಕೆಯಿಂದಾಗಿ ಜನಸಾಮಾನ್ಯರ ಜೀವನ ಮಟ್ಟ ತುಂಬಾ ಕುಸಿದಿದೆ. ಹೀಗಿದ್ದಾಗಲೂ ಕೂಡ ಕಳೆದ ತಿಂಗಳು ರಾಜ್ಯದ ಬಿಜೆಪಿ ಸರ್ಕಾರ ಮನೆ ಕರ ಮತ್ತು ನೀರಿನ ಕರಗಳನ್ನು ಹೆಚ್ಚಿಗೆ ಮಾಡಿದ್ದು ಬಾಣಲೆಯಿಂದ ಬೆಂಕಿಗೆ ಬಿದ್ದಂತಹ ಸ್ಥಿತಿ ಬಡಜನರದಾಗಿದೆ ಎಂದು ಮನವಿಯಲ್ಲಿ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದೆ. ಜನಸಾಮಾನ್ಯರ ಬದುಕಿನ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಮನೆ ಕರ ಮತ್ತು ನೀರಿನ ಕರವನ್ನು ಕೂಡಲೇ ಕಡಿಮೆ ಮಾಡಿ ಬಡ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರವಿಚಂದ್ರ ನಾಯ್ಕ, ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್ ಕೆಸರಲಿ, ನರ್ಮದಾ ನಾಯ್ಕ, ಕಾಂಗ್ರೆಸ್ ಜಿಲ್ಲಾ ಸಮಿತಿಯ ಪ್ರಮುಖರಾದ ಸರಸ್ವತಿ ಗುನಗ, ಅನಿಲ ಮರಾಠೆ, ತಾಲೂಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ನೇತ್ರೇಕರ, ತಾಲೂಕ ಕಮಿಟಿ ಪ್ರಮುಖರಾದ ಎನ್ ಎನ್ ಹೆಬ್ಬಾರ್, ವೆಂಕಟೇಶ ದೇವರ್ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸುವ ಸಂದರ್ಭದಲ್ಲಿ ಇದ್ದರು.
ತಹಶೀಲ್ದಾರ್ ಸಿ ಜಿ ನಾಯ್ಕ ಮನವಿ ಸ್ವೀಕರಿಸಿ ರವಾನಿಸುವ ಭರವಸೆ ನೀಡಿದರು.
ಮಾರ್ಚ್ 15ರಂದು ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಸೈಯದ್ ಕೆಸರಲಿ ಮತ್ತು ಇನ್ನಿತರರು ಮನೆ ಕರ ಮತ್ತು ನೀರಿನ ಕರವನ್ನು ಏರಿಕೆ ಮಾಡದಂತೆ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ನೀಡಿ ಆಗ್ರಹಿಸಿದ್ದರು.