ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ ನಂತರ ಅವರನ್ನು ಬಂಧಿಸಲಾಗಿದೆ.
ಮಾಡಾಳ್ ವಿರೂಪಾಕ್ಷ ತನಿಖೆಗೆ ಸಹಕರಿಸುತ್ತಿಲ್ಲ, ಅವರಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿತ್ತು. ಆರೋಪಿಯ ಜಾಮೀನು ಅರ್ಜಿಯನ್ನು ಕೋರ್ಟ್ ರದ್ದುಗೊಳಿಸಿತ್ತು. ಪರಿಣಾಮವಾಗಿ ಇದೀಗ ಅವರ ಬಂಧನವಾಗಿದೆ. ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ನಂತರ ಮಾಡಾಳ್ ವಿರೂಪಾಕ್ಷಪ್ಪ ಅವರ ದಾವಣಗೆರೆ ನಿವಾಸದ ಮೇಲೂ ಲೋಕಾಯುಕ್ತ ದಾಳಿ ನಡೆದಿತ್ತು. ಅಲ್ಲಿಯೂ ಕೋಟ್ಯಂತರ ರೂ. ನಗದು ಪತ್ತೆಯಾಗಿತ್ತು.
ನಂತರ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ದೊರೆತ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರಿಗೆ ತರಾತುರಿಯಲ್ಲಿ ಜಾಮೀನು ಮಂಜೂರು ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿಜೆಐಗೂ ಪತ್ರ ಬರೆಯಲಾಗಿತ್ತು.