ಸಿದ್ದಾಪುರ: ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡು ಮೃತನಾದ ಎನ್ನಲಾಗಿದ್ದ ಗಣಪತಿ ಭಟ್ ನೆಲೆಮಾವು ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಹುಬ್ಬಳ್ಳಿಯ ಈರಬಸಪ್ಪಾ ವಾಲಿಕಾರ್, ಧಾರವಾಡದ ಚಂದ್ರಶೇಖರ್ ಪೂಜಾರ್ ಹಾಗು ಶಿವಶಂಕರಪ್ಪಾ ಕುರಿ ಎಂಬ ಹೆಸರಿನ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
ಮೃತರ ಮಗನು ನೀಡಿದ ಹೇಳಿಕೆಯ ಆಧಾರದ ಮೇಲೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಆರೋಪಿತರು ಮಾ.10 ರಂದು ಮೃತರ ಮನೆಗೆ ಬಂದು, ಹಣ ನೀಡುವಂತೆ ಪೀಡಿಸಿ, ಬೈದು ಅವಮಾನ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎನ್ನಲಾಗಿದೆ.
ಮೃತರು ಹಣಕ್ಕಾಗಿ ಪೀಡಿಸುತ್ತಿದ್ದವರ ಹೆಸರನ್ನು ಚೀಟಿಯಲ್ಲಿ ಬರೆದು, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. “ಹುಬ್ಬಳ್ಳಿಯಿಂದ ಈರಬಸಪ್ಪಾ ವಾಲಿಕಾರ್ ಮತ್ತು ಧಾರವಾಡದ ಚಂದ್ರಶೇಖರ ಪೂಜಾರ ತುಂಬಾ ತೊಂದ್ರೆ ಕೊಡ್ತಾ ಇದ್ದ, ಅವಂಗ್ ಕೊಡ ಹಣ ಬಡ್ಡಿ ಸಮೇತ ಕೊಟ್ಟಿರುತ್ತೇನೆ, ಆದ್ರೂ ಸಹ ಸುಳ್ ಲೆಕ್ಕಾ ಹೇಳ್ತಾ ಇದ್ದ, ನಂಗ್ ಬೇರೆ ಗತಿ ಇಲ್ದೇ” ಎಂಬುದಾಗಿ ಸ್ವಂತ ಕೈಬರಹದಲ್ಲಿ ಚೀಟಿ ಬರೆದು ಸರಕುಳಿ ಸಮೀಪದ ಸಂಬಂಧಿಕರೊಬ್ಬರ ತೋಟದ ಮನೆಯ ಮೇಲ್ಚಾವಣಿಯ ಪಕಾಶಿಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಂಪ್ಲೇಂಟ್ ನಲ್ಲಿ ದಾಖಲಾಗಿದೆ ಶ್ಯಾಂ ಭಟ್ ಹೆಸರು : ಮೃತರು ಆರೋಪಿತರಿಂದ ಹಣ ಪಡೆದುಕೊಂಡಿದ್ದರು ಮತ್ತು ಶ್ಯಾಂ ಭಟ್ ಎನ್ನುವವರಿಗೆ ಹಣವನ್ನು ನೀಡಿದ್ದರು. ಮತ್ತು ಅವರು ಹಣ ಕೊಡದೇ ಸತಾಯಿಸುತ್ತಿದ್ದರು ಎಂದು ಮಗನು ಕೊಟ್ಟ ದೂರಿನಲ್ಲಿ ಶ್ಯಾಂ ಭಟ್ ಎಂಬ ಹೆಸರು ಉಲ್ಲೇಖವಾಗಿದ್ದು, ಹಣ ಪಡೆದುಕೊಂಡ ಶ್ಯಾಂ ಭಟ್ ಯಾರಿರಬಹುದು ಮತ್ತು ಪ್ರಕರಣದ ಪೂರ್ಣ ಹುರುಳು ಏನೆಂಬುದು ಪೋಲೀಸರ ತನಿಖೆಯಿಂದ ಹೊರಬರಬೇಕಿದೆ.