ಶಿರಸಿ: ತಾಲೂಕಿನ ಗೊಳಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಯುಗಾದಿ ನಿಮಿತ್ತ ಆಯೋಜಿಸಿದ್ದ ಸ್ವರಾಂಜಲಿ ಸಂಗೀತ ಕಾರ್ಯಕ್ರಮ ಸೇರಿದ್ದ ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿತು.
ಹೆಸರಾಂತ ಸಿತಾರ್ ವಾದಕರಾದ ಪಂಡಿತ ಆರ್ ವಿ. ಹೆಗಡೆ ಹಳ್ಳದಕೈ ಇವರಿಂದ ತಮ್ಮ ತಂದೆ ದಿ.ವಿಶ್ವನಾಥ ಹೆಗಡೆ ಹಳ್ಳದಕೈ ಹಾಗೂ ಗುರುಗಳಾದ ದಿ.ಡಾ. ಬಿಂಧುಮಾಧವ ಪಾಠಕ್ ಇವರ ಸ್ಮರಣಾರ್ಥ ಇಪ್ಪತ್ತನೆ ವರ್ಷದ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಸರೋಜಾ ಹಳ್ಳದಕೈ ಹಾಗೂ ಆರ್.ವಿ.ಹೆಗಡೆ ಹಳ್ಳದಕೈ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರಂಭದಲ್ಲಿ ವಿದೂಷಿ ಬಕುಳಾ ಶ್ರೀಪಾದ ಹೆಗಡೆ ಸೋಮನಮನೆ ಗಾಯನ ಕಾರ್ಯಕ್ರಮದಲ್ಲಿ ರಾಗ ಪುರಿಯಾ ಧನಶ್ರೀಯನ್ನು, ನಂತರದಲ್ಲಿ ಭಕ್ತಿ ಪ್ರಧಾನ ಹಾಡು ಹಾಡಿದರು. ಈ ಸಂದರ್ಭದಲ್ಲಿ ಹಾರ್ಮೊನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು, ತಬಲಾದಲ್ಲಿ ಶಂಕರ ಹೆಗಡೆ ಹಾಗು ಹಿನ್ನೆಲೆ ತಂಬೂರದಲ್ಲಿ ಪ್ರಜ್ವಲ ಹೆಗಡೆ ಸಾಥ್ ನೀಡಿದರು.
ನಂತರ ನಡೆದ ಸಿತಾರ್ ವಾದನದಲ್ಲಿ ಪಂ.ಆರ್.ವಿ.ಹೆಗಡೆ ಹಳ್ಳದಕೈ ಸಿತಾರ್ ವಾದನ ಕಾರ್ಯಕ್ರಮ ನಡೆಸಿಕೊಟ್ಟು ಆರಂಭಿಕವಾಗಿ ರಾಗ್ ಘೋರಕ್ ಕಲ್ಯಾಣದಲ್ಲಿ ವೈವಿಧ್ಯಮಯವಾಗಿ ನುಡಿಸಿ ನಂತರ ಧುನ್ ಒಂದನ್ನು ಪ್ರಸ್ತುತಗೊಳಿಸಿದಾಗ ಸಭೆಯ ಕರತಾಡನ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು. ತಬಲಾದಲ್ಲಿ ವಿದ್ವಾನ್ ಗೋಪಾಲಕೃಷ್ಣ ಹೆಗಡೆ ಕಲಭಾಗ ಸಾಥ್ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಖ್ಯಾತ ಗಾಯಕ ಧನಂಜಯ ಹೆಗಡೆ ಮುಂಬೈ ಗಾಯನ ಕಾರ್ಯಕ್ರಮ ಪ್ರಸ್ತುಪಡಿಸಿದರು. ಆರಂಭದಲ್ಲಿ ರಾಗ್ ಅಭೋಗಿಯನ್ನು ವಿಸ್ತಾರವಾಗಿ ಹಾಡಿದರು. ತದನಂತರ ದಾಸರ ಪದದಲ್ಲಿ ಜನಪ್ರಿಯ ಹಾಡನ್ನು ಹಾಡುತ್ತಾ ಕೊನೆಯಲ್ಲಿ ರಾಗ ಭೈರವಿಯಲ್ಲಿ ಭಕ್ತಪ್ರಧಾನ ಹಾಡು ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ ಎಂಬ ಹಾಡನ್ನು ಹಾಡಿ ಒಟ್ಟಾರೆ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ತಬಲಾದಲ್ಲಿ ವಿ.ಗೋಪಾಲಕೃಷ್ಣ ಹೆಗಡೆ ಕಲಭಾಗ ಹಾಗೂ ಹಾರ್ಮೊನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಸಮರ್ಥವಾಗಿ ಸಾಥ್ ನೀಡಿದರು. ಹಿನ್ನೆಲೆಯ ತಾನ್ಪುರದಲ್ಲಿ ಅಪೂರ್ವ ಭಟ್ಟ ಮತ್ತು ಪ್ರಜ್ವಲ ಹೆಗಡೆ ಸಹಕರಿಸಿದರು.
ಪಂ.ಆರ್.ವಿ.ಹೆಗಡೆ ಹಳ್ಳದಕೈ ಸ್ವಾಗತಿಸಿದರು. ಗೋಳಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಲ್.ಹೆಗಡೆ ಹಲಸಗಿ ಪ್ರಾಸ್ತಾವಿಕ ಮಾತನಾಡಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.