ಕಾರವಾರ: ತಾಲೂಕಿನ ಪ್ರಮುಖ ಬಂದರುಗಳಲ್ಲಿ ಒಂದಾದ ಬೈತ್ಕೋಲ್ ಮೀನುಗಾರಿಕಾ ಬಂದರಿನಲ್ಲಿ ಹೂಳು ತುಂಬಿಕೊಂಡಿದ್ದ ಪರಿಣಾಮ ದೊಡ್ಡ ಬೋಟುಗಳನ್ನು ನಿಲ್ಲಿಸಲು ಸಮಸ್ಯೆಯಾಗಿತ್ತು. ಮೀನುಗಾರಿಕಾ ಬೋಟುಗಳು ಒತ್ತೊತ್ತಾಗಿ ನಿಲ್ಲುವುದರ ಜೊತೆಗೆ ಹೂಳಿನಲ್ಲಿ ಹೂತು ಆಗಾಗ ಬೋಟ್ ಗಳಿಗೆ ಹಾನಿ ಸಹ ಆಗುತ್ತಿತ್ತು. ಸದ್ಯ ಮೀನುಗಾರರ ಸಮಸ್ಯೆಗೆ ಶಾಸಕಿ ರೂಪಾಲಿ ನಾಯ್ಕ ಸ್ಪಂದಿಸಿದ್ದು, ಬಂದರಿನಲ್ಲಿ ಹೂಳೆತ್ತುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿದ್ದಾರೆ.
ಬೈತ್ಕೋಲ್ ಮೀನುಗಾರಿಕಾ ಬಂದರು ಕಾರವಾರ ತಾಲೂಕಿನಲ್ಲಿಯೇ ಮೀನುಗಾರರ ಪ್ರಮುಖ ಬಂದರು. ಬಂದರಿನಲ್ಲಿ 2013ರ ವೇಳೆಗೆ ಅಂದಿನ ಮೀನುಗಾರಿಕಾ ಸಚಿವರಾಗಿದ್ದ ಆನಂದ್ ಅಸ್ನೋಟಿಕರ್ ನೂತನ ಜಟ್ಟಿಯನ್ನು ನಿರ್ಮಿಸಿದ್ದರು. ಆದರೆ ಇದಾದ ನಂತರ ಬಂದರಿನಲ್ಲಿ ಹೂಳನ್ನು ತೆಗೆಯದ ಹಿನ್ನಲೆಯಲ್ಲಿ ನೀರಿನ ಹರಿವು ಹೆಚ್ಚಿಗೆ ಇದ್ದಾಗ ಮಾತ್ರ ಮೀನುಗಾರಿಕಾ ಬೋಟುಗಳು ಮೀನು ತುಂಬಿಕೊಂಡು ಜಟ್ಟಿಯಲ್ಲಿ ನಿಲುಗಡೆ ಮಾಡುವಂತಾಗಿತ್ತು. ನೀರಿನ ಹರಿವು ಕಡಿಮೆಯಿದ್ದಾಗ ಬೋಟುಗಳ ತಳಕ್ಕೆ ಹೂಳು ತಾಗುವುದರಿಂದ ಹಾನಿಯಾಗುವ ಸಂಭವಗಳಿತ್ತು. ಮೀನುಗಾರರು ಹೂಳು ತೆರವಿಗೆ ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಮೀನುಗಾರರ ಸಮಸ್ಯೆಗೆ ಯಾರು ಸ್ಪಂದಿಸಿರಲಿಲ್ಲ. ಇನ್ನು ಸಮಸ್ಯೆ ಬಗೆಹರಿಸುವಂತೆ ಶಾಸಕಿ ರೂಪಾಲಿ ನಾಯ್ಕ ಗಮನಕ್ಕೆ ತಂದ ಹಿನ್ನಲೆಯಲ್ಲಿ ಶಾಸಕರ ಸತತ ಪ್ರಯತ್ನದಿಂದ ಕಾಮಗಾರಿಗೆ ಹಣ ಮಂಜೂರಾಗಿದೆ.
ಸರ್ಕಾರ ಸುಮಾರು 3.5 ಕೋಟಿ ವೆಚ್ಚದಲ್ಲಿ ಬಂದರಿನ ಹೂಳೆತ್ತಲು ಯೋಜನೆ ರೂಪಿಸಿದೆ. ಅಲ್ಲದೇ ಬಂದರು ಹೂಳೆತ್ತುವಿಕೆಯ ಜೊತೆಗೆ ಒಣಮೀನು ಒಣಗಿಸುವ ಪ್ಲಾಟ್‌ಫಾರ್ಮ, ರ್ಯಾಂಪ್ ನಿರ್ಮಾಣ ಸೇರಿದಂತೆ ಸುಮಾರು 4.5 ಕೋಟಿ ವೆಚ್ಚದ ಯೋಜನೆಗಳಿಗೆ ಹಣ ಮಂಜೂರಾಗಿದ್ದು, ಸೋಮವಾರ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬೈತಖೋಲ ಬಂದರಿನಲ್ಲಿ ಪರ್ಸಿನ್ ಹಾಗೂ ಟ್ರಾಲರ್ ಸೇರಿ ಸುಮಾರು ಮುನ್ನೂರಕ್ಕೂ ಅಧಿಕ ಬೋಟುಗಳಿದ್ದು ಪ್ರತಿನಿತ್ಯ ಇಲ್ಲಿನ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತವೆ. ಬೋಟುಗಳ ಸಂಖ್ಯೆ ಹೆಚ್ಚಿರುವ ಹಿನ್ನಲೆ 2013ರಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಂದರು ಪ್ರದೇಶದ ಜಟ್ಟಿ ವಿಸ್ತರಿಸಿ ನೂತನ ಜಟ್ಟಿಯನ್ನು ನಿರ್ಮಿಸಲಾಗಿತ್ತು. ಆದರೆ ಬಂದರು ಪ್ರದೇಶದಲ್ಲಿ ಹೂಳು ತುಂಬಿದ್ದರಿಂದಾಗಿ ನೂತನ ಜಟ್ಟಿ ಬಳಕೆಗೆ ಬಾರದಂತಾಗಿದ್ದು ಹಳೆಯ ಜಟ್ಟಿ ಪ್ರದೇಶದಲ್ಲೇ ಬಹುತೇಕ ಎಲ್ಲ ಬೋಟುಗಳು ನಿಲುಗಡೆಯಾಗುತ್ತಿದ್ದವು.
ಎರಡು ಭಾಗದಲ್ಲಿ ಹೂಳು ಸಾಕಷ್ಟು ಇದ್ದು ಸಮಸ್ಯೆಯಿಂದ ಮೀನುಗಾರರು ಪ್ರತಿನಿತ್ಯ ಪರದಾಟ ನಡೆಸುತ್ತಿದ್ದರು. ಇದೀಗ ಸರ್ಕಾರ ಬಂದರು ಹೂಳೆತ್ತಲು ಯೋಜನೆಗೆ ಹಣ ಬಿಡುಗಡೆ ಮಾಡಿ ಚಾಲನೆ ಸಿಕ್ಕಿರುವುದಕ್ಕೆ ಮೀನುಗಾರರು ಸಂತಸಪಟ್ಟಿದ್ದಾರೆ. ಒಟ್ಟಿನಲ್ಲಿ ಮೀನುಗಾರರ ದಶಕಗಳ ಬೇಡಿಕೆಗೆ ಕೊನೆಗೂ ಸರ್ಕಾರ ಅಸ್ತು ಎಂದಿರೋದು ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಆದಷ್ಟು ಬೇಗ ಕಾಮಗಾರಿ ಮುಗಿದು ಮುಂದಿನ ಮೀನುಗಾರಿಕಾ ವರ್ಷ ಪ್ರಾರಂಭದ ವೇಳೆಗೆ ಮೀನುಗಾರರ ಹೂಳಿನ ಸಮಸ್ಯೆ ಬಗೆಹರಿಯುವಂತಾಗಲಿ ಎನ್ನುವುದು ಮೀನುಗಾರರ ಅಭಿಪ್ರಾಯ.