ಶಿರಸಿ: ತನ್ನ ತರಗತಿಯ ಸ್ನೇಹಿತರಂತೆ ನನ್ನ ಬಳಿ ಒಳ್ಳೆಯ ಬಟ್ಟೆಗಳಿಲ್ಲ. ಹಳೆಯ ಕೊಳಕು ಬಟ್ಟೆ ಹಾಕಿಕೊಂಡು ಶಾಲೆಗೆ ಹೋದರೆ ಅವಮಾನವಗುತ್ತದೆ ಎಂದು ಬೇಸತ್ತ ವಿದ್ಯಾರ್ಥಿಯೊಬ್ಬ ಶಾಲೆಯನ್ನೇ ಬಿಡಲು ಮುಂದಾಗಿದ್ದ.
ಈ ಬಡ ವಿದ್ಯಾರ್ಥಿಯ ಕಷ್ಟ ಅರಿತ ಕನ್ನಡಿಗರ ಶಿಕ್ಷಣ ರಕ್ಷಣಾ ವೇದಿಕೆಯ ಪ್ರಮುಖರು ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಆತನಿಗೆ ನಾಲ್ಕು ಜೊತೆ ಹೊಸಬಟ್ಟೆ, ಸ್ಕೂಲ್ ಬ್ಯಾಗ್ , ಶ್ಯೂ,ಚಪ್ಪಲಿ, ಎರಡು ವರ್ಷಗಳಿಗೆ ಬೇಕಾಗುವಷ್ಟು ಪಠ್ಯ ಪರಿಕರಗಳನ್ನ ನೀಡಿ ವಿದ್ಯಾರ್ಥಿ ಶಾಲೆ ಬಿಡದಂತೆ ಬುದ್ದಿವಾದ ಹೇಳಿದ ಘಟನೆಯೊಂದು ನಡೆದಿದೆ.
ತಂದೆಯ ಅನಾರೋಗ್ಯ, ತಾಯಿಯ ಕೂಲಿನಾಲಿ ಕಂಡು ತನ್ನ ಅಜ್ಜಿಯ ಮನೆ ತಾಲೂಕಿನ ಹುಡೆಲಕೊಪ್ಪ ಗ್ರಾಮದಿಂದ ಮೂರು ಕಿಲೋಮೀಟರ ದೂರದ ಬಿಸಲಕೊಪ್ಪ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಯ ಪ್ರತಾಪ ಜಿ. ಹಸ್ಲರ್. ಇತನಿಗೆ ಹಾಕಿಕೊಳ್ಳಲು ಸರಿಯಾದ ಬಟ್ಟೆಬರೆ ಇರಲಿಲ್ಲ. ಇದರಿಂದ ಮನನೊಂದ ಪ್ರತಾಪ ಶಾಲೆ ಬಿಡುವುದಾಗಿ ಅಜ್ಜಿಯ ಬಳಿ ತಿಳಿಸಿದ್ದ.
ಈ ಬಗ್ಗೆ ಕನ್ನಡಿಗರ ಶಿಕ್ಷಣ ರಕ್ಷಣಾ ವೇದಿಕೆ ಗಮನಕ್ಕೆ ಬಂದಾಗ ದಾನಿ ನಟರಾಜ ಬಿ. ಹೊಸುರ್ ನೀಡಿದ ಹಣದಿಂದ ವೇದಿಕೆಯ ಪ್ರಮುಖರಾದ ಶರತ್ ಕುಮಾರ ಬಿಸಲಕೊಪ್ಪ, ಇಮ್ರಾನ್ ದನಗನಹಳ್ಳಿ, ಅಬ್ದುಲ್ಲಾ ಬೆಳ್ಳನಕೆರೆ, ಅರುಣ ಕಾಳಂಗಿ, ಹರೀಶ್ ನಾಯ್ಕ ಉಲ್ಲಾಳ, ರಾಮಣ್ಣ ಕಾಯಗುಡ್ಡಿ ಹಾಜರಿದ್ದು ವಿದ್ಯಾರ್ಥಿಗೆ ಪಠ್ಯ ಪರಿಕರ ವಿತರಿಸಿದರು.