ಕುಮಟಾ: ಪಟ್ಟಣದ ಗಿಬ್ ಹೈಸ್ಕೂಲ್ ಮೈದಾನದಲ್ಲಿ ಕುಮಟಾ ಮತ್ತು ಹೊನ್ನಾವರ ಬಿಜೆಪಿ ಮಂಡಲದಿoದ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆ ವಿಜೃಂಭಣೆಯಿoದ ಸಂಪನ್ನಗೊoಡಿದ್ದು, ಸಹಸ್ರಾರು ಕಾರ್ಯಕರ್ತರ ಉತ್ಸಾಹ ಬಿಜೆಪಿಗೆ ಬಲ ನೀಡಿತು.
ಕುಮಟಾ ಮತ್ತು ಹೊನ್ನಾವರ ಬಿಜೆಪಿ ಮಂಡಲದಿoದ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ನಿಮಿತ್ತ ಸಾವಿರಾರು ಕಾರ್ಯಕರ್ತರು ಬೈಕ್ ರ‍್ಯಾಲಿ, ಡೊಳ್ಳು ಕುಣಿತದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಿದರು. ಬಿಜೆಪಿ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆ ಮಾಸ್ತಿಕಟ್ಟೆ ಸರ್ಕಲ್, ಗಿಬ್ ಸರ್ಕಲ್ ಮೂಲಕ ಗಿಬ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶಗೊಂಡಿತು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಕಾಲದಲ್ಲಿ ಭಾರತೀಯ ಜನತಾ ಪಾರ್ಟಿ ಎಂದರೆ ಎಲ್ಲರೂ ಅಪಹಾಸ್ಯ ಮಾಡುತ್ತಿದ್ದರು. ಇಂದು ಬಿಜೆಪಿ ಎಂದರೆ ಎಲ್ಲರೂ ಅಪ್ಪಿಕೊಂಡು ಇಷ್ಟಪಡುವ ಪಾರ್ಟಿಯಾಗಿ ಬೆಳೆದಿದೆ. ಇದಕ್ಕೆ ನಮ್ಮ ಹಿರಿಯ ನೇತಾರರು ಕಾರಣರಾಗಿದ್ದಾರೆ. ನೀಡಿದ್ದ ಪ್ರತಿಯೊಂದು ಭರವಸೆಯನ್ನು ಈಡೇರಿಸಿರುವ ಬಿಜೆಪಿಗೆ ಮುಂಬರಲಿರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿ, ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವಲ್ಲಿ ನಮ್ಮೆಲ್ಲ ಪಕ್ಷದ ಕಾರ್ಯಕರ್ತರು ಕೈಜೋಡಿಸಬೇಕು ಎಂದು ವಿನಂತಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಸುಳ್ಳು ಭರವಸೆ ನೀಡುತ್ತದೆ. ಆದರೆ ಬಿಜೆಪಿ ಭರವಸೆ ನೀಡಿರುವುದನ್ನು ಈಡೇರಿಸುತ್ತದೆ. ಈ ಕಾರಣಕ್ಕೆ ಪಕ್ಷದ ಕಾರ್ಯಕರ್ತರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿದರು. ವಿಜಯ ಸಂಕಲ್ಪ ಯಾತ್ರೆಯ ರಾಜ್ಯ ಸಂಚಾಲಕ ವಿವೇಕಾನಂದ ಡಬ್ಬಿ, ಜಿಲ್ಲಾ ಸಹ ಪ್ರಭಾರಿ ಪ್ರಸನ್ನ ಕೆರೆಕೈ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರು ಎಸಳೆ, ಗುರುಪ್ರಸಾದ ಹೆಗಡೆ, ವಿಭಾಗ ಸಹ ಪ್ರಭಾರಿ ಎನ್.ಎಸ್.ಹೆಗಡೆ, ಜಿಲ್ಲಾ ಪ್ರಮುಖರಾದ ಡಾ.ಜಿ.ಜಿ. ಹೆಗಡೆ, ಶಿವಾನಿ ಶಾಂತರಾಮ, ಪ್ರೋ.ಎಂ.ಜಿ.ಭಟ್ಟ, ಉಷಾ ಹೆಗಡೆ, ರಾಜೇಂದ್ರ ನಾಯ್ಕ, ಹೊನ್ನಾವರ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಸ್ವಾಗತಿಸಿದರು. ಶಿಕ್ಷಕರಾದ ಗಣೇಶ ಜೋಶಿ ಹಾಗೂ ಚಿದಾನಂದ ಭಂಡಾರಿ ನಿರೂಪಿಸಿದರು.