ದಾಂಡೇಲಿ: ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳು, ವ್ಯಾಪಕವಾಗಿರುವ ಭ್ರಷ್ಟಚಾರದಿಂದ ಜನ ಬೇಸತ್ತಿದ್ದಾರೆ. ಈ ಕ್ಷೇತ್ರದಲ್ಲಿ ಈ ಬಾರಿ ಆರ್.ವಿ.ದೇಶಪಾಂಡೆಯವರು ಐತಿಹಾಸಿಕ ದಾಖಲೆಯ ಗೆಲುವು ಪಡೆಯಲಿದ್ದಾರೆ ಎನ್ನುವುದನ್ನು ಈ ಸಮಾವೇಶವೆ ಸಾರಿ ಹೇಳುತ್ತಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದರು.
ಇಲ್ಲಿ ನಡೆದ ಬೃಹತ್ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇವತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುವ ಮೂಲಕ ದೇಶದ ಜನತೆಯ ನಾಡಿಮಿಡಿತವನ್ನು ಮತ್ತು ಭವಿಷ್ಯದ ದಿನಗಳಲ್ಲಿ ಜನತೆಯ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರು ದೇಶದ ಜನತೆಯ ಮನ ಗೆದ್ದಿದ್ದಾರೆ ಎಂದ ಅವರು, ಜನತೆ ಈಗ ಬದಲಾವಣೆಯನ್ನು ಬಯಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಲೋಕೇಶ್ ವಶಿಷ್ಟ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಟಿ.ಎಸ್. ಮತ್ತು ಯುವ ಕಾಂಗ್ರೆಸ್ ರಾಜ್ಯ ಮುಖಂಡ ಶಶಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆರ್.ಹೆಗಡೆಯವರು ಕಾಂಗ್ರೆಸ್ ಗೆಲುವಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪಣತೊಡಬೇಕೆಂದು ಕರೆ ನೀಡಿದರು.
ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ನಾನು ಯುವ ಕಾಂಗ್ರೆಸ್‌ನಲ್ಲಿದ್ದರೂ ಈ ಪ್ರಮಾಣದಲ್ಲಿ ಸಮಾವೇಶವನ್ನು ಮಾಡಿರಲಿಲ್ಲ. ಉಸ್ಮಾನ್ ವಹಾಬ್ ಅವರ ನಾಯಕತ್ವಕ್ಕೆ ಮೆಚ್ಚಿದ್ದೇನೆ. ಯುವಕರು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಬೇಕು. ಇವತ್ತು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಟಿಲವಾಗತೊಡಗಿದೆ, ದೈನಂದಿನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇವೆಲ್ಲವುಗಳಿಂದಾಗಿ ಬಡವರು ಮತ್ತಷ್ಟು ಬಡವರಾಗಿಯೆ ಉಳಿದಿದ್ದಾರೆ. ಬಡತನ ನಿರ್ಮೂಲನೆಗೆ ಸುಯೋಗ್ಯ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ಸಂಪೂರ್ಣ ಹಿನ್ನಡೆ ಸಾಧಿಸಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರವಿದ್ದಾಗ ಈ ರಾಜ್ಯದ ಜನತೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಸಿಗುವ ಎಲ್ಲ ಸೌಲತ್ತುಗಳನ್ನು ಬಂದ್ ಮಾಡಿ, ಜಾತಿ, ಧರ್ಮದ ನಡುವೆ ಸಂಘರ್ಷಕ್ಕೆ ನಾಂದಿ ಹಾಡಿದೆ. ನಾವೆಲ್ಲರೂ ಒಂದೇ ಎಂಬ ಭಾತೃತ್ವ, ಸಮಾನತೆಯ ಸಮಾಜ ನಿರ್ಮಾಣವಾಗಬೇಕಾದರೇ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಚುನಾವಣೆಯ ಸಮಯದಲ್ಲಿ ಮತ ನೀಡುವಾಗ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಯೋಗ್ಯ ವ್ಯಕ್ತಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ದಾಂಡೇಲಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನಾ ವಹಾಬ್, ಆರ್.ವಿ.ದೇಶಪಾಂಡೆಯವರ ಆಶೀರ್ವಾದದಿಂದ ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಅಧ್ಬುತ ವ್ಯಕ್ತಿತ್ವದ ರಾಜಕಾರಣಿಯನ್ನು ಪಡೆದ ನಾವೆಲ್ಲರೂ ಭಾಗ್ಯವಂತರು. ಜೀವನವಿಡಿ ಕ್ಷೇತ್ರದ ಜನತೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಆರ್.ವಿ.ದೇಶಪಾಂಡೆಯವರಿಗೆ ಈ ಬಾರಿ ಅತ್ಯಧಿಕ ಮತಗಳನ್ನು ಕೊಡಿಸುವ ಕಾರ್ಯವನ್ನು ನಾವೆಲ್ಲರೂ ಅತ್ಯಂತ ಬದ್ಧತೆಯಿಂದ ಮಾಡಬೇಕೆಂದು ಕರೆ ನೀಡಿ, ಸಮಾವೇಶದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಅನಂತ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮಿಗಳಾದ ಅನಿಲ್ ಪಾಟ್ನೇಕರ್ ಮತ್ತು ಶಮಲ್ ಅಬುಲ್ಲಾ ಅವರು ತಮ್ಮ ಐನೂರಕ್ಕೂ ಅಧಿಕ ಬೆಂಬಲಿಗರೊoದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷದಗಳ ಮುಖಂಡರುಗಳು, ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಮೋಹನ ಹಲವಾಯಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯಲ್ಲಪ್ಪ ವಂದಿಸಿದರು.