ಸಿದ್ದಾಪುರ: ಭಾರತೀಯ ಪರಂಪರೆಯಲ್ಲಿ ವರ್ಷದ ಮೊದಲ ದಿನ ಯುಗಾದಿ. ಇದು ಯಾವುದೇ ಧರ್ಮಕ್ಕೆ ಅಥವಾ ಜಾತಿಗೆ ಸೀಮಿತವಾಗಿಲ್ಲ. ಬ್ರಿಟಿಷರ ಪ್ರಭಾವದಿಂದ ಜನವರಿ ಒಂದಕ್ಕೆ ಹೊಸ ವರ್ಷ ಆಚರಣೆ ಎಂಬುದು ರೂಡಿಗೆ ಬಂದಿದೆ.ಆದರೆ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಭಾರತೀಯ ಸಂಪ್ರದಾಯದoತೆ ಯುಗಾದಿ ಉತ್ಸವವನ್ನು ಸುಸಂಸ್ಕೃತ ರೀತಿಯಲ್ಲಿ ನಡೆಸುತ್ತಾ ಬರಲಾಗಿದೆ.ಈ ಬಾರಿಯೂ ಮಾರ್ಚ್ 22ರ ಬುಧವಾರ ಯುಗಾದಿ ಉತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ.ಶ್ರೀಧರ್ ವೈದ್ಯ ಹೇಳಿದರು.
ಅವರು ಪಟ್ಟಣದ ಯುಗಾದಿ ಉತ್ಸವ ಸಮಿತಿಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅಂದು ಮಧ್ಯಾಹ್ನ 3 ಗಂಟೆಯಿoದ ಹೊಸಪೇಟೆಯ ಗಣಪತಿ ದೇವಸ್ಥಾನ ದಿಂದ ಹೊರಡುವ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೆಹರು ಮೈದಾನವನ್ನು ತಲುಪಲಿದೆ. ಶೋಭಾಯಾತ್ರೆಯಲ್ಲಿ ಮಂಗಳೂರಿನ ನಾಸಿಕ್ ಬ್ಯಾಂಡ್, ಕುಂದಾಪುರದ ಡಿ ಜೆ ಮತ್ತು ಸ್ಥಳೀಯ ಕಲಾವಿದರಗಳಿಂದ ಟ್ಯಾಬ್ಲೋ ಪ್ರದರ್ಶನ ನಡೆಯಲಿದೆ.
ಸಂಜೆ 6 ಗಂಟೆಯಿoದ ನೆಹರು ಮೈದಾನದಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ.ಸದಾಶಿವಪೇಟೆಯ ಶ್ರೀ ವೀರಕ್ತ ಮಠದ ಶ್ರೀ ಗದಿಗೇಶ್ವರ ಮಹಾ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಬಾರ್ಕೂರು ಮಹಾಸಂಸ್ಥಾನದಡಾ. ವಿದ್ಯಾ ವಾಚಸ್ಪತಿ ವಿಶ್ವ ಸಂತೋಷ ಭಾರತೀ ಶ್ರೀಪಾದರು ದಿವ್ಯ ಉಪಸ್ಥಿತಿ ನೀಡಲಿದ್ದಾರೆ. ಮುಖ್ಯ ವಕ್ತಾರರಾಗಿ ಚೈತ್ರ ಕುಂದಾಪುರ ಭಾಗಿಯಾಗಲಿದ್ದಾರೆ.ರಾತ್ರಿ 8 ರಿಂದ ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಸತೀಶ ಹೆಮ್ಮಾಡಿಯವರಿಂದ ಜಾದೂ ಪ್ರದರ್ಶನ ಮತ್ತು ರಾತ್ರಿ 10 ರಿಂದ ಹಟ್ಟಿಯಂಗಡಿ ಮೇಳದವರಿಂದ ದೀಪದರ್ಪಣ ಯಕ್ಷಗಾನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಆನಂದ ಈರಾ ನಾಯ್ಕ, ಕಾರ್ಯಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್, ಕೋಶಾಧ್ಯಕ್ಷ ಸುದರ್ಶನ ಪಿಳ್ಳೆ, ಸಮಿತಿಯ ಗಣೇಶ ಶಾನಭಾಗ, ರಾಘವೇಂದ್ರ ನಾಯ್ಕ, ವಿನಯ ಹೊನ್ನೆಗುಂಡಿ ಇದ್ದರು.