ಶಿರಸಿ: ಅರಣ್ಯವಾಸಿಗಳ ಮತ್ತು ಅರಣ್ಯ ಸಿಬ್ಬಂದಿಗಳ ಸಂಘರ್ಷ ಇಂದು ನಿನ್ನೆಯದಲ್ಲ. ಅರಣ್ಯವಾಸಿಗಳ ಹಕ್ಕಿಗೆ ಮತ್ತು ಸಾಗುವಳಿಗೆ ಅರಣ್ಯ ಸಿಬ್ಬಂದಿಗಳು ಆತಂಕ ಉಂಟು ಮಾಡಿದಾಗಲೆಲ್ಲ ಹೋರಾಟ ತೀವ್ರಗೊಂಡಿರುವ ಸಾಕಷ್ಟು ನಿದರ್ಶನಗಳಿವೆ.
ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಾನೂನಾತ್ಮಕ ವಿಶ್ಲೇಷಣೆಗೆ ಸ್ಪಷ್ಟತೆ ಬಯಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ಇವರಿಗೆ, ಫೇಬ್ರವರಿ 28 ರಂದು ಐದು ಪ್ರಶ್ನೆಗಳ ಉತ್ತರವನ್ನ ಬಯಸಿ ಸಾರ್ವಜನಿಕವಾಗಿ ಪತ್ರ ನೀಡಿದ್ದು ಇದೆ. ಸಿ.ಸಿ.ಎಫ್ ಅನುಪಸ್ಥಿತಿಯಲ್ಲಿ ಶಿರಸಿ ಡಿ.ಎಫ್.ಒ ಅಜ್ಜಯ್ಯ ಸಿ.ಸಿ.ಎಫ್ ಅವರ ಅನುಮತಿಯ ಮೇರೆಗೆ ಉತ್ತರ ನೀಡಲು ಒಂದು ವಾರದ ಕಾಲಾವಕಾಶವನ್ನು ಹಿರಿಯ ಪೋಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಘೋಷಿಸಿ, ಮೂರು ವಾರ ಗತಿಸಿದರೂ ಉತ್ತರಿಸದೇ ಇರುವುದಕ್ಕೆ, ‘ಸಾಹೇಬರೇ ನಮ್ಮ ಪ್ರಶ್ನೆಗೆ ಉತ್ತರ ನೀಡಿ’– ಎಂಬ ಕೂಗನ್ನು ಅರಣ್ಯ ಅಧಿಕಾರಿಗಳಿಗೆ ತಲುಪಿಸುವ ಕಾರ್ಯ ಮಾಡಲಾಗುವುದೆಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾನೂನಾತ್ಮಕ ಸ್ಪಷ್ಟ ಪ್ರಶ್ನಾವಳಿಗಳ ಉತ್ತರವನ್ನು ಬಯಸಿ ಮಾ.20 ಸೋಮವಾರ ಮುಂಜಾನೆ ಶಿರಸಿಯ ಅರಣ್ಯ ಅಧಿಕಾರಿಗಳಿಗೆ ‘ಸಾಹೇಬರೇ ನಮ್ಮ ಪ್ರಶ್ನೆಗೆ ಉತ್ತರ ನೀಡಿ’ — ಎಂಬ ಕೂಗನ್ನು ತಲುಪಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಐದು ಪ್ರಶ್ನಾವಳಿಗಳ ಪಟ್ಟಿ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಅಧಿಭೋಗ ಮತ್ತು ಸಾಗುವಳಿ ಕ್ಷೇತ್ರಕ್ಕೆ ಒಕ್ಕಲೆಬ್ಬಿಸಬಾರದು ಮತ್ತು ಆತಂಕ ಪಡಿಸಬಾರದು, ಒಕ್ಕಲೆಬ್ಬಿಸುವ ಪೂರ್ವ ಕರ್ನಾಟಕ ಅರಣ್ಯ ಕಾಯಿದೆ ಕಲಂ 64 ಎ ಪ್ರಕ್ರಿಯೆ ಜರುಗಿಸುವುದು, ಅರಣ್ಯವಾಸಿಯ ಸಾಗುವಳಿಗೆ ಮತ್ತು ಮೂಲಭೂತ ಸೌಕರ್ಯಕ್ಕೆ ಆತಂಕಪಡಿಬಾರದು, ಅರಣ್ಯವಾಸಿಗಳ ಮೇಲೆ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡಬಾರದು, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರ ಮೇಲೆ ಜರಗುತ್ತಿರುವ ಒಕ್ಕಲೆಬ್ಬಿಸುವ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸುವುದು ಎಂಬ ಐದು ಪ್ರಶ್ನೆಗಳ ಪಟ್ಟಿಯನ್ನು ಅರಣ್ಯ ಇಲಾಖೆಗೆ ರವಾನಿಸಲಾಗಿತ್ತು.