ಕಾರವಾರ: ಕೇಂದ್ರ ಚುನಾವಣೆ ಆಯೋಗವು ಈಗಾಗಲೇ ರಾಜ್ಯಕ್ಕೆ ಆಗಮಿಸಿ ಚುನಾವಣೆ ಪೂರ್ವ ತಯಾರಿ ಬಗ್ಗೆ ಪರಿಶೀಲನೆ ಮಾಡಿದ್ದು, ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕೂಡಲೇ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಚುನಾವಣೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳಿಗೆ ಮಾದರಿ ನೀತಿ ಸಂಹಿತೆ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬOಧಿಸಿದ ಚುನಾವಣೆ ನಡಾವಳಿ, ಮತದಾನದ ವಿಧಾನ, ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ತಿದ್ದುಪಡಿ, ರಾಜಕೀಯ ಪಕ್ಷಗಳ ದೂರುಗಳು, ರಾಜಕೀಯ ಪಕ್ಷಗಳ ಹೊಂದಾಣಿಕೆ ಮುಂತಾದವುಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ದಾಖಲೆಗಳೊಂದಿಗೆ ವರದಿಯನ್ನು ಇಟ್ಟುಕೊಳ್ಳುವಂತೆ, ಅವಶ್ಯಕತೆ ಇದ್ದಲ್ಲಿ ಮಾಹಿತಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಎಲ್ಲಾ ಅಧಿಕಾರಿಗಳು ಸಕ್ರಿವಾಗಿ ಕಾರ್ಯನಿವಹಿಸುತ್ತಿದ್ದು, ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದಾಗ ಚುನಾವಣೆಗೆ ಸಂಬoಧಿಸಿದ ಅಗತ್ಯ ಮಾಹಿತಿಯನ್ನು ದಾಖಲೆಗಳೊಂದಿಗೆ ಪೂರೈಸಬೇಕು ಎಂದು ಹೇಳಿದರು. ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಬೇರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾವುದೇ ಗೊಂದಲವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪದೋಷಗಳಾದರೆ ಅದಕ್ಕೆ ಸಂಬoಧಿಸಿದ ಅಧಿಕಾರಿ ನೇರ ಹೊಣೆಗಾರರಾಗುತ್ತಾರೆ. ಅಂತಹ ಲೋಪದೋಷಗಳು ಕಂಡುಬoದಲ್ಲಿ ಅಥವಾ ಗೊಂದಲ ಉಂಟಾದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ಹಾಗೆಯೇ ಸ್ವೀಪ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ತಡೆಗೆ ಚೆಕ್ಪೋಸ್ಟ್ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು ಹಾಗೂ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅಗತ್ಯ ಕ್ರಮ ವಹಿಸಬೇಕು. ಹಾಗೆಯೇ ಕೋಸ್ಟ್ಗಾರ್ಡ್, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಹಾಗೂ ನೌಕಾದಳದವರೊಂದಿಗೆ ಸಭೆ ಕರೆದು ಈ ಬಗ್ಗೆ ಕ್ರಮ ವಹಿಸಲು ಸೂಚಿಸಿದರು. ವಲಯ ಅಧಿಕಾರಿಗಳು ಬೂತ್ ಭೇಟಿಗಳ ಬಗ್ಗೆ ಮಾಹಿತಿ ಇಟ್ಟುಕೊಳ್ಳಬೇಕು. ಮತದಾನ ಸಂದರ್ಭದಲ್ಲಿ ಜನಸಂದಣಿಯನ್ನು ತಡೆಗಟ್ಟಲು ಯೋಜನೆಯನ್ನು ರೂಪಿಸಿ ಜನಸಂದಣಿ ತಡೆಗಟ್ಟಲು ಕ್ರಮ ವಹಿಸಬೇಕು. ಚುನಾವಣೆಯು ಬೇಸಿಗೆ ಕಾಲದಲ್ಲಿ ಇರುವುದರಿಂದ ಮತದಾನ ಸಂದರ್ಭದಲ್ಲಿ ಯಾವ ಕ್ಷೇತ್ರದಲ್ಲಿ ನೆರಳಿನ ವ್ಯವಸ್ಥೆ ಇಲ್ಲವೋ ಅಲ್ಲಿ ನೆರಳಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಹಿರಿಯ ನಾಗರಿಕರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕ್ರಮ ವಹಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಚುನಾವಣೆಗೆ ಸಂಬoಧಿಸಿದ ತರಬೇತಿ ನೀಡಿರು. ಈಗಾಗಲೇ ಚುನಾವಣಾ ಅಧಿಕಾರಿಗಳಿಗೆ ಮತ್ತು ಸಹಾಯಕ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದರು. ಚುನಾವಣೆಯಲ್ಲಿ ಚುನಾವಣೆ ಅಧಿಕಾರಿ ಮತ್ತು ಸಹಾಯ ಅಧಿಕಾರಿಗಳ ಪಾತ್ರ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ರಾಜಕೀಯ ಪಕ್ಷದ ನಾಯಕರು ನಾಮಿನೇಷನ್ ಮಾಡುವಂಥ ಸಂದರ್ಭದಲ್ಲಿ ಯಾವೆಲ್ಲ ಕ್ರಮ ಅನುಸರಿಸಬೇಕು ಮತ್ತು ಮಾದರಿ ನೀತಿ ಸಂಹಿತೆಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುವುದನ್ನು ತರಬೇತಿಯಲ್ಲಿ ತಿಳಿಸಿಕೊಟ್ಟರು.
ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ಕುಮಟಾ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್, ಶಿರಸಿ ಉಪವಿಭಾಗಧಿಕಾರಿ ದೇವರಾಜ, ಡಿಯುಡಿಸಿ ಯೋಜನಾ ಅಧಿಕಾರಿ ಸ್ಟೆಲ್ಲಾ ವರ್ಗಿಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಹಾಗೂ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.