ಹಳಿಯಾಳ: ನಾನು ಜೆಡಿಎಸ್ ಪಕ್ಷ ಸೇರಿದ 20 ದಿನಗಳಲ್ಲಿಯೇ ಕ್ಷೇತ್ರದಲ್ಲಿ ಈಗಾಗಲೇ ಮೂರು- ನಾಲ್ಕಾಂಶ ಕಾಂಗ್ರೆಸ್ಸಿಗರು ಹಾಗೂ ಅರ್ಧದಷ್ಟು ಬಿಜೆಪಿ ಕಾರ್ಯಕರ್ತರು, ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ. ಹೀಗಾಗಿ ನನ್ನ ಗೆಲುವು ಶತಃಸಿದ್ಧ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಬಳಿಕ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಸೇರಿದ್ದರ ಬಗ್ಗೆ ಕ್ಷೇತ್ರದಲ್ಲಿ ರೈತ ಸಮುದಾಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ರೈತರ ಪಕ್ಷಕ್ಕೆ ಸೇರಿರುವ ನನ್ನನ್ನು ಶಾಸಕರಾಗಿ ಆಯ್ಕೆ ಮಾಡುವುದಾಗಿ ವಾಗ್ದಾನ ಮಾಡುತ್ತಿದ್ದು, ಪ್ರತಿದಿನ ಭೇಟಿ ನೀಡುತ್ತಿರುವ ಗ್ರಾಮಗಳಲ್ಲಿ ಅಭೂತಪೂರ್ವ ಸ್ವಾಗತದ ಜೊತೆಗೆ ಬೆಂಬಲ ದೊರೆಯುತ್ತಿದೆ. ಕೇವಲ 20 ದಿನಗಳಲ್ಲಿಯೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ನನ್ನ ನಾಯಕತ್ವ ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷವನ್ನು ತಳಮಟ್ಟದಿಂದ ಬಲಿಷ್ಠವಾಗಿ ಸಂಘಟಿಸಲಾಗುತ್ತಿದೆ. ಹಳಿಯಾಳ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಪಾರ ಬೆಂಬಲಿಗರು, ಅಭಿಮಾನಿಗಳಿದ್ದಾರೆ ಎಂದರು.
ಶಾಸಕ ಆರ್.ವಿ.ದೇಶಪಾಂಡೆ ಅವರು ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ಈಗ ಚುನಾವಣೆ ಸಂದರ್ಭದಲ್ಲಿ ಸಿಕ್ಕ ಸಿಕ್ಕಲ್ಲಿ ಅಡಿಗಲ್ಲು, ಭೂಮಿ ಪೂಜೆ, ಶಂಕುಸ್ಥಾಪನೆ ಕಾರ್ಯ ಮಾಡುತ್ತಿರುವುದು ಕೇವಲ ಚುನಾವಣೆ ಗಿಮಿಕ್ ಆಗಿವೆ ಎಂದ ಅವರು, ಕೆಲವೇ ದಿನಗಳಲ್ಲಿ ಹಳಿಯಾಳ- ದಾಂಡೇಲಿ- ಜೊಯಿಡಾ ವಿಧಾನಸಭಾ ಕ್ಷೇತ್ರದ ಮೂರು ತಾಲೂಕುಗಳ ಜೆಡಿಎಸ್ ಪಕ್ಷದ ಸಮಿತಿ ರಚಿಸಿ, ಪದಾಧಿಕಾರಿಗಳ ಘೋಷಣೆ ಮಾಡಲಾಗುವುದೆಂದು ತಿಳಿಸಿದರು.
ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈಗಲೂ ಬಿಜೆಪಿ ಪಕ್ಷದಿಂದ ನನಗೆ ಕರೆ ಬರುತ್ತಿದೆೆ. ಆದರೆ ಅಂದು ಬಿಜೆಪಿ ಸೇರಲು 3 ತಿಂಗಳುಗಳ ಕಾಲ ಪ್ರಯತ್ನಿಸಿದರು ಸ್ಪಂದಿಸದೆ ಇಂದು ನಮ್ಮ ಸಂಘಟನಾ ಕಾರ್ಯ, ಜನಬೆಂಬಲ ಕಂಡು ಬಿಜೆಪಿಗೆ ಸೇರುವಂತೆ ಕೇಳುತ್ತಿರುವುದು ಸಮಂಜಸವಲ್ಲ. ನಾನು ಎಂದಿಗೂ ಜೆಡಿಎಸ್ ಪಕ್ಷ ಬಿಡುವುದಿಲ್ಲ. ಒಂದಾನುವೇಳೆ ಬಿಟ್ಟರೆ ಜನ ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರೀನಿವಾಸ ಘೋಟ್ನೇಕರ್, ಟಿ.ಕೆ.ಗೌಡ, ಯಲ್ಲಪ್ಪ ಮಾಲವನಕರ, ವಾಮನ ಮಿರಾಶಿ, ವಿಜಯಕುಮಾರ ಬೋಬಾಟಿ, ಸಂತೋಷ ಮಿರಾಶಿ, ಸಂಜಯ ಪಾಟೀಲ್, ರಹಮಾನ ಜಂಬುವಾಲೆ, ಅಶೋಕ ಘೋಟ್ನೇಕರ, ನಸ್ರುಲ್ಲಾ ಖಾನ್ ಇತರರು ಇದ್ದರು.