ಯಲ್ಲಾಪುರ: ಪಟ್ಟಣದ ಹೆಸ್ಕಾಂ ಕಚೇರಿಯ ಎದುರಿನ ಮೈದಾನದಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಅಪ್ಪ ಚಿಂತ್ಯಾಗ, ಮಗಳು ಸಂತ್ಯಾಗ’ ಎಂಬ ನಾಟಕ ಪ್ರದರ್ಶನದಲ್ಲಿ ಸಿಗರೇಟ್ ಸೇವನೆಯ ದೃಶ್ಯವನ್ನು ವೈಭವೀಕರಿಸಿದ ಕಾರಣಕ್ಕೆ ಆರೋಗ್ಯ ಇಲಾಖೆಯಿಂದ ಸೋಮವಾರ ನಾಟಕ ಕಂಪನಿಗೆ ನೋಟೀಸ್ ಜಾರಿ ಮಾಡಲಾಗಿದೆ.
ನಾಟಕ ಕಂಪನಿಗೆ ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ನೋಟೀಸ್ ಜಾರಿ ಮಾಡಿದ್ದು, ನೋಟೀಸಿನಲ್ಲಿ ಸಿಗರೇಟ್ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ನಾಟಕದ 2,3ದೃಶ್ಯಗಳಲ್ಲಿ ಸಿಗರೇಟು ಸೇವನೆಯನ್ನು ವೈಭವೀಕರಿಸಲಾಗುತ್ತಿದೆ. ತಂದೆಯೇ ಮಗನಿಗೆ ಸಿಗರೇಟು ಹಚ್ಚಿಕೊಡುವ ದೃಶ್ಯ ಸಿಗರೇಟು ಸೇವನೆಗೆ ಪ್ರಚೋದನೆ ನೀಡುವಂತಿದೆ. ಸಿಗರೇಟು ಸೇದಿ ಹೊಗೆ ಬಿಡುತ್ತಿರುವುದು ಪ್ರೇಕ್ಷಕರಿಗೆ ತೊಂದರೆಯಾಗುತ್ತಿದೆ. ಯುವ ಜನಾಂಗಕ್ಕೆ ಪ್ರೇರಣೆ ನೀಡುವಂತಿದೆ.
ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂದೇಶವನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಸಿಗರೇಟು ಸೇವನೆಯು ಕಲಾವಿದರ ಆರೋಗ್ಯಕ್ಕೂ ಒಳ್ಳೇಯದಲ್ಲ ಎಂದು ತಿಳಿಸಿಲಾಗಿದೆ.
ನಾಟಕದ ಮುಂದಿನ ಪ್ರದರ್ಶನಗಳಲ್ಲಿ ಇಂತಹ ದೃಶ್ಯಗಳು ಮುಂದುವರೆದಲ್ಲಿ ನಾಟಕ ಕಂಪನಿಯ ವಿರುದ್ಧ ಕೋಟ್ಪಾ-2003 ಕಾಯ್ದೆಯ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.