ಶಿರಸಿ: ಅಂಬಿಗ ಎನ್ನುವವನು ನಂಬಿಗಸ್ಥ ಮನುಷ್ಯನಿದ್ದ ಹಾಗೇ. ನದಿದಾಟುವಾಗ ಜನರು ಅವನ ಮೇಲೆ ಭರವಸೆಯನ್ನಿಟ್ಟು ದೋಣಿ ಹತ್ತುತ್ತಾರೆ. ಸಾಗರ ಎಷ್ಟೇ ಆಳವಿದ್ದರೂ ಭಯಪಡದೆ ಸುರಕ್ಷಿತವಾಗಿ ದಡ ಸೇರುತ್ತೇವೆ ಎನ್ನುವ ನಂಬಿಕೆ ಅಂಬಿಗನ ಮೇಲಿಡುತ್ತಾರೆ ಎಂದು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ನುಡಿದರು.
ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಶನಿವಾರ ಶಿರಸಿ ತಾಲೂಕ ಗಂಗಾಮಾತ ಅಂಬಿಗ ಸಮಾಜ ಅಭಿವೃದ್ಧಿ ಸಂಘ ಹಾಗೂ ಗಂಗಾಮತಸ್ಥ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಮಾಜದ ಶ್ರೇಯೋಭಿವೃದ್ದಿಗಾಗಿ ಹಮ್ಮಿಕೊಂಡ ಗಂಗಾಮತಸ್ಥ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗಂಗಾಮತಸ್ಥ ಸಮುದಾಯದಲ್ಲಿ ಒಟ್ಟು 39 ಪಂಗಡಗಳಿದ್ದು ಅದನ್ನು ಒಗ್ಗೂಡಿಸುವ ಪ್ರಯತ್ನ ಆಗಬೇಕಿದೆ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಹಾಗೂ ಆರ್ಥಿಕವಾಗಿ ಸಮುದಾಯದವರು ಹಿಂದುಳಿದಿದ್ದು ಅವರನ್ನು ಮುನ್ನೆಲೆಗೆ ತರುವಂತ ಪ್ರಯತ್ನವಾಗಬೇಕಿದೆ. ಮಕ್ಕಳಿಗೆ ಶಿಕ್ಷಣ ನೀಡಲು ಹಿಂದೇಟು ಹಾಕಬಾರದು, ಅವರ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಕೊಡಿಸುವುದು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ ಎಂದ ಅವರು ಅಂಬಿಗರ ಚೌಡಯ್ಯನವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕೆಂದು ಕರೆ ನೀಡಿದರು.
ಇದೆ ವೇಳೆ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಶಿರಸಿಯಲ್ಲಿ ನೂತನವಾಗಿ ಆರಂಭವಾದ ಪುಣ್ಯ ಕೋಟಿ ಮೀನುಗಾರರ ಸಹಕಾರಿ ಸಂಘವನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಸಮುದಾಯದ ಪ್ರಮುಖರಾದ ಡಾ. ಎಸ್.ಕೆ. ಮೆಲ್ಕರ್, ದ್ಯಾಮಣ್ಣ ದೊಡ್ಮನಿ, ಉಷಾ ಕಬ್ಬೆರ್,ಪುರುಷೋತ್ತಮ ಕಲ್ಮನೆ, ದಿನೆಶ್ ಕುಮಾರ್ ಮಸಲ್ದಿ, ಕೆ.ಎನ್.ಹೊಸ್ಮನಿ, ಗಣಪತಿ ಅಂಬಿಗ, ಗಜಾನನ ಕಲ್ಮನೆ ಸೇರಿದಂತೆ ನೂರಾರು ಸಮಾಜದ ಬಾಂಧವರು ಭಾಗಿಯಾಗಿದ್ದರು.