ಹೊನ್ನಾವರ: ಮಹಿಳೆಯರ ಸ್ವಾವಲಂಬನೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಮಹಿಳಾ ಸಂಘಟನೆಗಳು ಅದರ ಸದುಪಯೋಗ ಪಡೆಯುವಂತೆ ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸ್ವ- ಸಹಾಯ ಸಂಘಗಳ ಜಿಲ್ಲಾ ಮಟ್ಟದ ವಸ್ತುಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕರು ಸ್ವಸಹಾಯ ಗುಂಪುಗಳಿಗೆ ಪ್ರಮಾಣಿತ ಉತ್ಪನ್ನಗಳನ್ನು ತಯಾರಿಸಲು ನೆರವಾಗುವ ಸ್ತ್ರೀ ಸಾಮರ್ಥ್ಯ ಯೋಜನೆಯಡಿಯಲ್ಲಿ 50 ಸಾವಿರ ಸ್ವಸಹಾಯ ಗುಂಪುಗಳಿಗೆ ತಲಾ 1 ಲಕ್ಷ ರೂಪಾಯಿಗಳಂತೆ ಒಟ್ಟು 500ಕೋಟಿ ರೂ. ಗಳ ಸಮುದಾಯ ಬಂಡವಾಳ ನಿಧಿ ನೀಡಲು ಮುಂದಾಗಿದೆ. ವಿವಿಧ ಸ್ವಯಂ ಉದ್ಯೋಗ ಯೋಜನೆಗಳ ಅಡಿ 7,239 ಸ್ವಸಹಾಯ ಸಂಘಗಳಿಗೆ 108 ಕೋಟಿ ರೂಪಾಯಿ ಸಮುದಾಯ ಬಂಡವಾಳ ನಿಧಿ, 5.68 ಲಕ್ಷ ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಸಂಪರ್ಕದಡಿ 11,391 ಕೋಟಿ ರೂ. ಸಾಲವನ್ನು ಒದಗಿಸಲಾಗಿದೆ. ವೈಯಕ್ತಿಕ ಮತ್ತು ಗುಂಪುಗಳನ್ನು ಒಳಗೊಂಡ 9,688 ಫಲಾನುಭವಿಗಳಿಗೆ ಕಿರು ಉದ್ದಿಮೆ ಪ್ರಾರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಸರ್ಕಾರ ನೀಡಲು ಮುಂದೆ ಬಂದಿದೆ. ಉತ್ತಮ ಸಂಘ ನಿರ್ವಹಣೆಗಾಗಿ ಜಿಲ್ಲೆಗೆ ಆರು ಪ್ರಶಸ್ತಿ ಹಾಗೂ ಕುಮಟಾ ತಾಲೂಕಿಗೆ ಪ್ರಥಮ ಪ್ರಶಸ್ತಿ ಬಂದಿರುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ರಿಕ್ಷಾ ಚಾಲನೆಯಿಂದ ಹಿಡಿದು, ಪ್ರತಿ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಸರ್ಕಾರದ ವಿವಿಧ ಸೌಲಭ್ಯ ಪಡೆದು ಮಹಿಳೆಯರು ಸ್ವಾವಲಂಭಿ ಜೀವನ ನಡೆಸಿ ಆರ್ಥಿಕ ಸ್ವಾವಲಂಬನೆಯಾಗುವಂತೆ ಕರೆ ನೀಡಿದರು.
ತಾಲೂಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿ ಸರೋಜಾ ಶೆಟ್ಟಿ ಮಾತನಾಡಿ ಜಿಲ್ಲಾಮಟ್ಟದ ಕಾರ್ಯಕ್ರಮ ನಡೆಯುತ್ತಿರುವ ಸಂತಸವಿದ್ದು, ಮುಂದಿನ ದಿನದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಜರುಗುವಂತಾಗಲಿ ಎಂದು ಶುಭಹಾರೈಸಿದರು. ವೇದಿಕೆಯಲ್ಲಿ ಮುಗ್ವಾ ಗ್ರಾ.ಪಂ. ಅಧ್ಯಕ್ಷೆ ಗೌರಿ ಅಂಬಿಗ, ನರೇಗಾ ಸಹಾಯಕ ನಿರ್ದೇಶಕರಾದ ಕೃಷ್ಣಾನಂದ, ಪ.ಪಂ.ಸದಸ್ಯ ವಿಜಯ ಕಾಮತ್, ನಾಮನಿರ್ದೇಶಕ ಸದಸ್ಯ ದತ್ತಾತ್ರೇಯ ಮೇಸ್ತ, ಇಲಾಖೆಯ ಅಧಿಕಾರಿಗಳು ಎನ್.ಇ.ಎಮ್.ಎಲ್. ಸಿಬ್ಬಂದಿಗಳು ಹಾಜರಿದ್ದರು. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಸ್ವಾಗತಿಸಿ, ಬಾಲಚಂದ್ರ ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿಗಳು ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲೆಯ 6 ತಾಲೂಕಿನ 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗೃಹಪ್ರಯೋಗಿ ಹಾಗೂ ದಿನಸಿ, ವಿವಿಧ ಖಾದ್ಯಗಳ ಮಾರಾಟ ಮತ್ತು ಪ್ರದರ್ಶನ ಜರುಗಿತು.