ಯಲ್ಲಾಪುರ: ತಾಲೂಕಿನ ಹುಬ್ಬಳ್ಳಿ ರಸ್ತೆ ಕೋಳಿಕೇರಿಯಲ್ಲಿ ಬಸ್ ನಿಲುಗಡೆ ಮಾಡುವಂತೆ ಜಯ ಕರ್ನಾಟಕ ಸಂಘಟನೆ ಕೋಳಿಕೇರಿ ಘಟಕ ಶುಕ್ರವಾರ ಸಾರಿಗೆ ಘಟಕದ ವ್ಯವಸ್ಥಾಪಕ ಸಂತೋಷ ರಾಯ್ಕರ್ ಅವರಲ್ಲಿ ತೆರಳಿ ಮನವಿ ನೀಡಿ, ಆಗ್ರಹಿಸಿದರು.
ಕೋಳಿಕೇರಿಯಿಂದ ಯಲ್ಲಾಪುರಕ್ಕೆ ಪ್ರತಿ ದಿವಸ 100ಕ್ಕೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೋಗಿ ಬರುತ್ತಾರೆ. ಪ್ರತಿದಿನ 250 ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳು ಕೋಳಿಕೇರಿಯಿಂದ ಯಲ್ಲಾಪುರಕ್ಕೆ ಹಾಗೂ ಕೋಳಿಕೇರಿಯಿಂದ ಹುಬ್ಬಳ್ಳಿ, ಕಿರವತ್ತಿ, ಕಲಘಟಗಿ ಊರುಗಳಿಗೆ ಪ್ರಯಾಣಿಸುತ್ತಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಪ್ರಯಾಣಿಕರು ಸಾರಿಗೆ ಬಸ್ಸಿನಲ್ಲಿ ಸಂಚರಿಸುತ್ತಿದ್ದು, ಕೋಳಿಕೇರಿ ಗ್ರಾಮದ ಬಸ್ ನಿಲ್ದಾಣದಲ್ಲಿ ಯಾವುದೇ ಬಸ್ ನಿಲುಗಡೆ ಮಾಡುತ್ತಿಲ್ಲ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಶಾಲಾ- ಕಾಲೇಜು, ಬೇರೆ ಬೇರೆ ಪಟ್ಟಣ ನಗರ ಹಳ್ಳಿಗಳಿಗೆ ಪ್ರಯಾಣಿಸುವಲ್ಲಿ ಸಮಸ್ಯೆಯಾಗುತ್ತಿದ್ದು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ ಬಸ್ಸುಗಳನ್ನು ನಿಲುಗಡೆಗೊಳಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹಿಸಿತು. ಈ ಕುರಿತು ಹಿರಿಯ ಅಧಿಕಾರಿಗಳ ಗಮನ ತಂದು ಬಸ್ ನಿಲುಗಡೆಗೆ ಪ್ರಯತ್ನ ಮಾಡಲಾಗುವುದು ಎಂದು ಘಟಕ ವ್ಯವಸ್ಥಾಪಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಆರ್.ಫರ್ನಾಂಡಿಸ್, ನಗರ ಘಟಕ ಅಧ್ಯಕ್ಷ ಕೆ.ಎಫ್.ಕಂಬನ್ನವರ, ಕೋಳಿಕೇರಿ ಘಟಕದ ಅಧ್ಯಕ್ಷ ಸಂತೋಷ ಪಡೇಕರ, ಮಹೇಂದ್ರ ಗಾವಡೆ, ಮಹಿಳಾ ಘಟಕದ ಅಧ್ಯಕ್ಷರಾದ ಹನುಮವ್ವ ಗಾಜಣ್ಣನವರ, ದುರ್ಗಾ ನಾಯ್ಕ, ವಿಷ್ಣು ಖರಾತ, ರಿಯಾಜ್ ಶೇಖ್, ಸಲೀಂ ಲಡ್ಡುಪೀರ ಮನವಿ ನೀಡುವ ಸಂದರ್ಭದಲ್ಲಿದ್ದರು.