ಯಲ್ಲಾಪುರ: ಇಂದು ಮಹಿಳೆ ಯಾವುದಕ್ಕೂ ಜಗ್ಗದೆ ತಾನು ಪುರುಷರಿಗೆ ಕಡಿಮೆ ಇಲ್ಲ ಎನ್ನುವಂತೆ ಎಲ್ಲ ರಂಗದಲ್ಲೂ ಸಾಧನೆ ಮಾಡಿದ್ದಾಳೆ. ಮಹಿಳೆ ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಗಟ್ಟಿಯಾಗಿ ಹೋರಾಟ ಮಾಡಬೇಕು ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಹೇಳಿದರು.
ಅವರು ಶುಕ್ರವಾರ ಬೆಳಿಗ್ಗೆ ಪಟ್ಟಣದ ಮಚ್ಚಿಗಲ್ಲಿ ಸ್ತ್ರೀಶಕ್ತಿ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಕಂದಾಯ ಇಲಾಖೆ ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಶೋಷಣೆಗೆ ಒಳಗಾಗಿದ್ದ ಮಹಿಳೆಗೆ ಪುರುಷರ ಸಮಾನವಾಗಿ ಗೌರವ ಸಮಾನತೆಯನ್ನು ನೀಡಲು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವ ಮೂಲಕ ಮಹಿಳೆಯ ಸಬಲೀಕರಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಕುಟುಂಬದಲ್ಲಿರುವ ಪ್ರೀತಿ ವಾತ್ಸಲ್ಯ ಭರವಸೆಯನ್ನು ದುರುಪಯೋಗ ಪಡಿಸಿಕೊಳ್ಳದೆ ಮಹಿಳೆಯರು ಕಾನೂನು ಹಾಗೂ ಸಂವಿಧಾನ ನೀಡಿರುವ ಹಕ್ಕನ್ನು ಬಳಸಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವರಾಯ ಎಚ್.ದೇಸಾಯಿ ಮಾತನಾಡಿ, ಶಿಲಾಯುಗದಲ್ಲಿ ಮೇಲು-ಕೀಳು, ಮಹಿಳೆ-ಪುರುಷ ಎನ್ನುವ ಭೇದಭಾವ ಇರಲಿಲ್ಲ. ಎಲ್ಲರೂ ಸೇರಿ ದುಡಿಯುತ್ತಿದ್ದರು. ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ನಂತರದ ಬೆಳವಣಿಗೆ ಮಹಿಳೆಯರ ಹಕ್ಕುಗಳನ್ನು ಕಸಿಯತೊಡಗಿದವು. ಇದೀಗ ಮಹಿಳಾ ದಿನಾಚರಣೆಯ ಆಚರಿಸುವ ಮೂಲಕ ಮಹಿಳೆಯರ ಹಕ್ಕುಗಳನ್ನು ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ, ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿದಾಗ ಅವರು ಭವಿಷ್ಯದಲ್ಲಿ ಸ್ವತಂತ್ರವಾಗಿ, ಧೈರ್ಯವಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು. ‘ಮಹಿಳಾ ಮತ್ತು ಕುಟುಂಬ ಸಂಬಂಧಿತ ಕಾನೂನುಗಳು’ ಕುರಿತು ಉಪನ್ಯಾಸ ನೀಡಿದ ಹೆಚ್ಚುವರಿ ಸರಕಾರಿ ವಕೀಲರಾದ ಎನ್.ಟಿ.ಗಾಂವ್ಕರ ಹಾಗೂ ಪ್ಯಾನಲ್ ವಕೀಲರಾದ ಸರಸ್ವತಿ ಭಟ್ ‘ಮಹಿಳಾ ಕಾನೂನುಗಳು ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ತಡೆಗಟ್ಟುವಕೆಯಲ್ಲಿ ಪೋಕ್ಸೊ ಕಾಯ್ದೆ’ಯ ಕುರಿತು ಉಪನ್ಯಾಸ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಝೀನತ್ಬಾನು ಶೇಖ್, ಶಿಕ್ಷಣ ಸಂಯೋಜಕರಾದ ಷಣ್ಮುಖ ಹೆಗಡೆ, ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ್, ತಾಲೂಕಾ ಒಕ್ಕೂಟದ ಅಧ್ಯಕ್ಷೆ ಮಾಲಾ ವೇದಿಕೆಯಲ್ಲಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಫೀಕಾ ಹಳ್ಳೂರು ಸ್ವಾಗತಿಸಿದರು, ಈರವ್ವ ಪೂಜಾರಿ ನಿರ್ವಹಿಸಿದರು, ಅರೆಕಾಲಿಕ ಸ್ವಯಂಸೇವಕರಾದ ಸುಧಾಕರ ನಾಯಕ ವಂದಿಸಿದರು. ಇದೇ ಸಂದರ್ಭದಲ್ಲಿ ಶೇ 100ರಷ್ಟು ಹಾಜರಾತಿ ತೋರಿದ ಅಂಗನವಾಡಿ ಕಾರ್ಯಕರ್ತರಿಗೆ ಪ್ರಮಾಣಪತ್ರ ವಿತರಿಸಲಾಯಿತು.