ಕುಮಟಾ: ಪಟ್ಟಣದ ಮಾಸ್ತಿಕಟ್ಟೆ ಸರ್ಕಲ್ ಬಳಿ ಹೆದ್ದಾರಿ ದಾಟುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.
ಗದಗ ಮೂಲದ ಹಾಲಿ ಕುಮಟಾ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿರುವ, ನೆಲ್ಲಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿ ಗಂಗಾಧರ (13) ಹಾಗೂ 6 ನೇ ತರಗತಿ ವಿದ್ಯಾರ್ಥಿ ನವೀನಕುಮಾರ (12) ಗಾಯಗೊಂಡವರಾಗಿದ್ದಾರೆ. ಈ ವಿದ್ಯಾರ್ಥಿಗಳು ದೀವಗಿ ಕಡೆಯಿಂದ ಗಿಬ್ ಸರ್ಕಲ್ ಬಳಿಗೆ ತೆರಳುತ್ತಿದ್ದಾಗ ಹೆದ್ದಾರಿ ದಾಟುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ತಕ್ಷಣ ಸ್ಥಳೀಯರ ಸಹಕಾರದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭಾರತಿ ಆಚಾರಿ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ಕುಮಟಾ ಪಟ್ಟಣದ ನೆಲ್ಲಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ತೆರಳುತ್ತಾರೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲೆ ಆರಂಭದ ವೇಳೆ ಮತ್ತು ಶಾಲೆ ಬಿಡುವ ವೇಳೆ ಪೊಲೀಸರನ್ನು ನಿಯೋಜಿಸಬೇಕು ಎಂದು ಪಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.