ಕಾರವಾರ: ಮಹಿಳೆಯರು ಎಂದಾಕ್ಷಣ ಬಹಳ ಕ್ಷೀಣವಾಗಿ ನೋಡುವ ಕಾಲವಿದೆ. ಇದು ನಾಚಿಕೆಯ ಸಂಗತಿ, ಮಹಿಳೆ ಈಗಿನ ಸನ್ನಿವೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದರು ನೂರು ಜನ ಬೆಟ್ಟು ತೋರಿಸುತ್ತಾರೆ. ಮಹಿಳೆ ಕೆಲಸ ಮಾಡುವುದು ನೋಡಲು ಕೆಲವರಿಗೆ ಆಗುವುದಿಲ್ಲ. ಕೇವಲ ಟೀಕೆ ಮಾಡುವುದೇ ಕೆಲವರಿಗೆ ಕೆಲಸವಾಗಿದ್ದು ಅಂತವರ ಬಗ್ಗೆ ಮಹಿಳೆಯರು ತಲೆ ಕೆಡೆಸಿಕೊಳ್ಳಬೇಡಿ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ನಗರದ ಮಿತ್ರ ಸಮಾಜದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ನಾನು ಮಹಿಳೆಯಾಗಿ ಹಲವು ಸಮಸ್ಯೆಗಳನ್ನ ಎದುರಿಸಿ ಬಂದಿದ್ದೇನೆ. ಶಾಸಕಿ ಚುನಾವಣೆಗೆ ನಿಂತಾಗ ಹಲವರು ಕಷ್ಟ ಕೊಟ್ಟಿದ್ದರು. ಶಾಸಕರಾದ ನಂತರವೂ ನನಗೆ ಕಾಟ ಕೊಡುವುದು ಬಿಟ್ಟಿಲ್ಲ. ಆದರೆ ಅದನ್ನ ಮೆಟ್ಟಿ ನಿಲ್ಲುವ ತಾಕತ್ತನ್ನ ಮಹಿಳೆಯರು ನೀಡಿದ್ದಾರೆ ಎಂದರು.
ನಮಗೆ ಸದ್ಯದ ಮಟ್ಟಿಗೆ ಎಲ್ಲವನ್ನ ಎದುರಿಸುವ ಶಕ್ತಿ ಇದೆ. ತಾಕತ್ತು ಅದರೆ ಮಹಿಳಾ ತಾಕತ್ತು ಆಗಿರುತ್ತದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಇರುವವರೆಗೆ ಕಾಂಗ್ರೆಸ್ ಧೂಳಿಪಟ ಆಗುತ್ತದೆ. ಕಾರವಾರದಲ್ಲಿ ಗ್ರಾಮ ಪಂಚಾಯತ್ ಗಳು ಕಾಂಗ್ರೆಸ್ ನಿಂದ ಕಾಲಿಯಾಗುತ್ತಿದ್ದು ಸುಮಾರು 25 ಜನ ಸದಸ್ಯರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ. ದೊಡ್ಡ ಮಟ್ಟದಲ್ಲಿ ಬಿಜೆಪಿ ಸೇರುತ್ತಿದ್ದಾರೆ. ಮುಸಲ್ಮಾನ ಬಾಂದವರು ಸಹ ಸಮಾವೇಶಕ್ಕೆ ಬಂದಿದ್ದು, ಮುಸಲ್ಮಾನ ಬಾಂದವರು ಬಿಜೆಪಿಗೆ ಮತವನ್ನ ಹಾಕಲು ಪ್ರಾರಂಭಿಸಿದ್ದಾರೆ. ಬಿಜೆಪಿ ಕಷ್ಟದಿಂದ ಮೇಲಕ್ಕೆ ಬಂದಿದ್ದು ಅದನ್ನ ಬೇರೆ ಕಡೆ ಹೋಗಲು ಬಿಡುವುದಿಲ್ಲ. ಬಿಜೆಪಿ ಇನ್ನೋಂದು ಸಾರಿ ಗೆಲ್ಲಿಸಲು ಎಲ್ಲರೂ ಸಹಕರಿಸಬೇಕಾಗಿದೆ ಎಂದರು.
ಮಹಿಳೆಯರು ಇಂದು ಯಾವುದರಲ್ಲೂ ಕಡಿಮೆ ಇಲ್ಲ. ಪುರುಷರು ಸಾಧನೆ ಮಾಡಿದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಇಂದು ಸಾಧನೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಅತ್ಯಂತ ಬಡ ಕುಟುಂಬದಿAದ ಬಂದ ಹಾಲಕ್ಕಿ ಒಕ್ಕಲಿಗ ಸಮಾಜದ ಹಾಡುಹಕ್ಕಿ ಸುಕ್ರಿ ಗೌಡ ಹಾಗೂ ವೃಕ್ಷಮಾತೆ ಈ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ರೂಪಾಲಿ ನಾಯ್ಕ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಮಹಿಳಾ ಸಮಾವೇಶದ ಮೂಲಕ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಆರಕ್ಕೆ ಆರು ಕ್ಷೇತ್ರದಲ್ಲಿ ಗೆಲ್ಲುವ ಸಂದೇಶ ಸಾರಿದೆ. ನಗರಾಡಳಿತ, ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ಶೇಕಡಾ 50ಕ್ಕೂ ಕಡಿಮೆ ಇಲ್ಲದಷ್ಟು ಮಹಿಳಾ ಮೀಸಲಾತಿ ನೀಡಿದ ಕೀರ್ತಿ ಭಾರತೀಯ ಜನತಾ ಪಕ್ಷಕ್ಕೆ ಇದೆ. ಮಹಿಳೆಯರ ಪರ ಅನೇಕ ಯೋಜನೆಗಳನ್ನ ಬಿಜೆಪಿ ಸರ್ಕಾರ ನೀಡಿದೆ. ಚುನಾವಣೆಯಲ್ಲಿ ಪ್ರತಿ ಮನೆಯಲ್ಲೂ ಮಹಿಳೆಯರು ಜಾಗೃತರಾಗಿ ಕೆಲಸ ಮಾಡಬೇಕಗಿದೆ. ನಾವು ಜಿಲ್ಲೆಯಲ್ಲಿ ಆರಕ್ಕೆ ಐದು ಕ್ಷೇತ್ರದಲ್ಲಿ ಗೆದ್ದಿದ್ದು ಮುಂದಿನ ಚುನಾವಣೆಯಲ್ಲಿ ಆರು ಕ್ಷೇತ್ರದಲ್ಲೂ ಗೆಲ್ಲಬೇಕು. ಕರಾವಳಿ ಹಾಗೂ ಮಲೆನಾಡು ಭಾಗ ಬಿಜೆಪಿ ಭದ್ರಕೋಟೆಯಾಗಿದ್ದು ಮುಂದಿನ ಚುನಾವಣೆಯಲ್ಲಿ ಗೆಲ್ಲುವನ್ನ ಪಡೆಯುವ ಮೂಲಕ ಈ ಮಾತನ್ನ ಉಳಿಸಿಕೊಳ್ಳಬೇಕು ಎಂದು ಪೂಜಾರಿ ಹೇಳಿದ್ದಾರೆ.