ಜೊಯಿಡಾ: ನಮ್ಮ ಹಳಿಯಾಳ- ಜೊಯಿಡಾ- ದಾಂಡೇಲಿ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಎಸ್.ಎಲ್.ಘೋಟ್ನೇಕರ ಭಾರಿ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಶರತಚಂದ್ರ ಗುರ್ಜರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದು ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಕಳೆದ 25 ವರ್ಷಗಳಿಂದ ಈ ಭಾಗದ ಮಂತ್ರಿಯಾಗಿ, ಶಾಸಕರಾಗಿ ಆಯ್ಕೆಯಾದ ದೇಶಪಾಂಡೆ ಅವರು ಇಲ್ಲಿನ ಜನರಿಗೆ ಅನ್ಯಾಯ ಮಾಡಿದ್ದಾರೆ. ಕನಿಷ್ಟ ಕುಡಿಯುವ ನೀರನ್ನು ಇಲ್ಲಿನ ಜನರಿಗೆ ಒದಗಿಸಿಲ್ಲ. ಅಭಿವೃದ್ಧಿ ಮಾಡಿದ್ದೇನೆ ಎಂದು ಬೀಗುವ ದೇಶಪಾಂಡೆ ಹಳ್ಳಿ ಜನರಿಗೆ ರಸ್ತೆ ಮಾಡಿ ಕೊಡಲಿ. ಇವರ ಪಕ್ಷದ ಕಾರ್ಯಕರ್ತರ ಮನೆಗೆ ರಸ್ತೆ ಮಾಡಬೇಕಾದರೆ ಅರಣ್ಯ ಇಲಾಖೆ ಅಡ್ಡಿ ಮಾಡುವುದಿಲ್ಲ, ಜನಸಾಮಾನ್ಯರ ಮನೆಗೆ ರಸ್ತೆ ಮಾಡಲು ಇವರೇ ಹೇಳಿ ಕಡ್ಡಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಬಂದಾಗ ಇಲ್ಲಿಯ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇನೆ ಎಂದು ಮೋಸ ಮಾಡುತ್ತಾರೆ. ಸದ್ಯ ದೇಶಪಾಂಡೆ ಅವರಿಗೆ ಅರಳು- ಮರಳು. ತಮ್ಮ ಪಕ್ಷದಲ್ಲಿ ಇದ್ದವರನ್ನೇ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಪಾಪ, ಈಗ ವಯಸ್ಸಾದ ಕಾರಣ ಸಣ್ಣ ಮಕ್ಕಳಂತೆ ಮಾಡುತ್ತಿದ್ದಾರೆ. ಎಷ್ಟೋ ಜನ ಗುತ್ತಿಗೆದಾರರು ದೇಶಪಾಂಡೆಗೆ ಹೆದರಿ ತಮ್ಮ ಬಿಲ್ ಪಾಸ್ ಮಾಡುವುದಿಲ್ಲ ಎನ್ನುವ ಉದ್ದೇಶದಿಂದ ಅವರ ಹಿಂದೆ ಇದ್ದಾರೆ; ಬಿಟ್ಟರೆ ಅವರೆಲ್ಲರೂ ಘೋಟ್ನೇಕರ್ ಅಭಿಮಾನಿಗಳೇ. ಇನ್ನುಳಿದಂತೆ ಬಿಜೆಪಿಯ ಸುನೀಲ್ ಹೆಗಡೆಯಂತು ಮೋದಿ ಹೆಸರಿನಲ್ಲಿ ಬದುಕುತ್ತಾರೆ. ಎಲ್ಲಿ ಹೋದರು ಭಾಷಣ ಬಿಟ್ಟರೆ ಅಭಿವೃದ್ಧಿ ಶೂನ್ಯ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದೆ. ಸುನೀಲ್ ಹೆಗಡೆ ಕೇವಲ ಪ್ರಚಾರ ಪ್ರಿಯ ಅಷ್ಟೇ. ಈ ಎರಡು ರಾಜಕಾರಣಿಗಳು ಈ ಭಾಗದ ಜನತೆಗೆ ಮೋಸ ಮಾಡಿದ್ದಾರೆ. ಈ ಬಾರಿ ಜನಪ್ರಿಯ ನಾಯಕ, ಜನರ ಸಮಸ್ಯೆಗೆ ಸ್ಪಂದಿಸುವ ಎಸ್.ಎಲ್.ಘೋಟ್ನೇಕರ ಅವರನ್ನು ನಮ್ಮ ಭಾಗದ ಶಾಸಕರನ್ನಾಗಿ ಮಾಡೋಣ ಎಂದರು.
ಜೆಡಿಎಸ್ ತಾಲೂಕಾ ಘಟಕದ ಅಧ್ಯಕ್ಷ ಅಜಿತ ಥೋರವತ ಮಾತನಾಡಿ, ನಮ್ಮ ಕುಮಾರಣ್ಣ ಮುಂದಿನ ಮುಖ್ಯಮಂತ್ರಿ ಆಗುವುದು ಖಚಿತ. ಈ ಭಾಗದಲ್ಲಿ ಘೋಟ್ನೇಕರ ಅವರನ್ನು ಅಧಿಕಾರಕ್ಕೆ ತರುವುದು ಜನರ ಕೈಯಲ್ಲಿದೆ. ಎಲ್ಲರೂ ಘೋಟ್ನೇಕರ ಅವರಿಗೆ ಬೆಂಬಲ ನೀಡಿ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ರೈತರ ಸಮಸ್ಯೆಯನ್ನು ಮೊದಲು ಬಗೆಹರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಸುಮಂಗಲಾ ದೇಸಾಯಿ, ರಾಮು ನಾಯ್ಕ, ಶ್ಯಾಮ ಪೊಕಳೆ ಇತರರು ಇದ್ದರು.