ಹೊನ್ನಾವರ: ಆಟೋ ರಿಕ್ಷಾ ಚಾಲಕರ ಬಹುವರ್ಷದ ಬೇಡಿಕೆಯಾದ ಗ್ಯಾಸ್ ಬಂಕ್ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿದ್ದು, ಕೂಡಲೇ ಅರಂಭಿಸಲು ಅಧಿಕಾರಿಗಳ ಹಂತದಲ್ಲಿರುವ ತೊಡಕು ಬಗೆಹರಿಸುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ಉಪವಿಭಾಗಾಧಿಕಾರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಆಟೋ ಚಾಲಕ ಮತ್ತು ಮಾಲಕರು ಮನವಿ ಸಲ್ಲಿಸಿದ್ದಾರೆ.
ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 3000ಕ್ಕೂ ಅಧಿಕ ಎಲ್‌ಪಿಜಿ, ರಿಕ್ಷಾ ಹಾಗೂ ಕಾರುಗಳು ಇರುವುದರಿಂದ ಹೊನ್ನಾವರಕ್ಕೆ ಅತೀ ಶೀಘ್ರವಾಗಿ ಎಲ್‌ಪಿಜಿ ಗ್ಯಾಸ್ ಬಂಕ್ ಅವಶ್ಯವಿದೆ. ದಿನನಿತ್ಯ ಗ್ಯಾಸ್ ಅಳವಡಿಕೆಗಾಗಿ ನೆರೆಯ ಕುಮಟಾ ತಾಲೂಕನ್ನು ಅವಲಂಬಿಸುವ ಸ್ಥಿತಿ ಇದೆ. ಇದರಿಂದ ದುಡಿಮೆಯ ಆದಾಯ ಅನಾವಶ್ಯಕ ವೆಚ್ಚವಾಗುದಲ್ಲದೇ ಅಪಘಾತ ಮತ್ತಿತರ ಘಟನೆ ಸಂಭವಿಸಿದರೆ ಇನ್ನಷ್ಟು ವೆಚ್ಚವಾಗಲಿದೆ. ಈಗಾಗಲೇ ಪಟ್ಟಣದಲ್ಲಿ ಕಾರ್ಯರಂಭ ಮಾಡಬೇಕಿದ್ದ ಎಲ್‌ಪಿಜಿ ಡಿಸ್ಪೆನ್ಸರಿಯ ಶೇ 90ರಷ್ಟು ಕೆಲಸ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಆರಂಭ ಆಗುತ್ತದೆ ಎನ್ನುವ ಸಮಯದಲ್ಲಿ ಲೀಸ್ ನೀಡಿದ ಕುಟುಂಬದವರ ಆಸ್ತಿ ವ್ಯಾಜ್ಯ ನಡೆದು ಎನ್‌ಓಸಿ ಸಮಸ್ಯೆಯಾಗಿ ನಿಂತಿರುವುದು ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳು ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಎಲ್‌ಪಿಜಿ ಗ್ಯಾಸ್ ಡಿಸ್ಪೆನ್ಸರಿ ಆರಂಭ ಆಗುವ ಬಗ್ಗೆ ಹಾಗೂ ಹೊನ್ನಾವರ ಕರ್ಕಿಯ ಪೈ & ಕಂಪನಿಯವರಿಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್‌ರವರು ಎಲ್‌ಪಿಜಿ ಗ್ಯಾಸ್ ಡಿಸ್ಪೆನ್ಸರಿಗೆ ಅನುಮತಿ ನೀಡಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಆಟೋ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ, 10 ವರ್ಷದಿಂದಲೂ ಈ ಬೇಡಿಕೆ ಇಡುತ್ತಿದ್ದು, ಕರ್ಕಿಯಲ್ಲಿ 95% ಕೆಲಸ ಮುಗಿದ ಬಳಿಕ ಸಿಎನ್‌ಜಿ ಪಂಪ್ ನೀಡಿದರು. ಪಟ್ಟಣದಲ್ಲಿ ನಿರ್ಮಾಣ ಹಂತದ ಬಂಕ್ ಎಗ್ರಿಮೆಂಟ್ ಮಾಡಿಕೊಂಡವರು ಕೋರ್ಟ್ ಮೊರೆ ಹೋಗಿ ತಡೆ ಬಂದಿದೆ. ಯಾವುದೇ ಕ್ಷಣದಲ್ಲಿ ಕೋರ್ಟ್ ತಡೆ ತೆರೆವು ಮಾಡಲಿದ್ದು, ಜಿಲ್ಲಾಧಿಕಾರಿಗಳು ಎನ್‌ಒಸಿ ನೀಡುವ ಮೂಲಕ ಆಟೋದವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡ ಸೂರಜ್ ಸೋನಿ ಮಾತನಾಡಿ, ತಾಲೂಕಿನಲ್ಲಿ 1000ಕ್ಕೂ ಅಧಿಕ ಆಟೋ ಓಡಾಡಲಿದೆ. ಜನರ ಸಮಸ್ಯೆ ಬಗೆಹರಿಸುವುದು ಜನಪ್ರತಿನಿಧಿ ಹಾಗೂ ಸರ್ಕಾರದ ಆದ್ಯ ಕರ್ತವ್ಯ. ಸ್ವ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇವೆ ಎನ್ನುವವರು ಆಟೋದವರ ನೆರವಾಗುತ್ತಿಲ್ಲ. ಹೊನ್ನಾವರದ ಎಲ್ಲಾ ಸಮಸ್ಯೆಗೂ ಹೋರಾಟದ ಮೂಲಕವೇ ನ್ಯಾಯ ಪಡೆಯಬೇಕಾಗಿರುವುದು ದುರಾದೃಷ್ಟವಾಗಿದೆ. ಶಾಸಕನಾಗಿ ಆಯ್ಕೆಯಾದರೆ ಮೂರು ತಿಂಗಳಲ್ಲಿ ಬಂಕ್ ಆರಂಭಿಸಲು ಇರುವ ತೊಡಕು ನಿವಾರಿಸಿ ಆಟೋದವರಿಗೆ ನೆರವಾಗುವ ಭರವಸೆ ನೀಡಿದರು.
ಬಂಕ್ ಮಾಲಕ ಸೀತಾರಾಮ ಭಟ್ ಈ ಸಮಸ್ಯೆ ದೊಡ್ಡದಾಗಿಸಿ ರಿಕ್ಷಾದವರಿಗೆ ವಂಚನೆ ಮಾಡುತ್ತಾರೆ. ಕುಮಟಾದಲ್ಲಿ ಇರುವ ಐದು ಪಂಪ್‌ಗಳಲ್ಲಿ 2 ಪಂಪ್ ಲೈಸನ್ಸ್ಸ್ ಇಲ್ಲದೇ ನಡೆಯುತ್ತಿದೆ. ಹೊನ್ನಾವರದಲ್ಲಿ 2 ಬಂಕ್ ಲೈಸನ್ಸ್ ನೀಡಿದರು ಅವರು ಮಾಡದೇ ಇದ್ದರೆ ಇದುವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ? ಸರ್ಕಾರದ ನಿಯಮಾನುಸಾರವಾಗಿ ಲೈಸನ್ಸ್ ಪಡೆಯಲು ದಾಖಲಾತಿ ನೀಡಿದರೂ ಹಣ ಮುಟ್ಟಿಲ್ಲ ಎಂದು ಲೈಸನ್ಸ್ ನೀಡಿಲ್ಲವಾ ಎಂದು ಖಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ ಮನವಿ ಸ್ವೀಕರಿಸಿದರು. ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ, ಹೋರಾಟದ ನೇತ್ರತ್ವ ವಹಿಸಿದ್ದ ಪ್ರಭಾಕರ ಮೇಸ್ತ ಸೇರಿದಂತೆ ಪಟ್ಟಣ ಮತ್ತು ಗ್ರಾಮೀಣ ಭಾಗದ ನೂರಾರು ಸಂಖ್ಯೆಯ ಆಟೋ ಚಾಲಕ ಮಾಲಕರು ಇದ್ದರು. ಮನವಿ ನೀಡುವ ಪೂರ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಆಟೋ ಪಟ್ಟಣದ ವಿವಿಧಡೆ ಮೆರವಣೆಗೆಯ ಮೂಲಕ ತಹಶೀಲ್ದಾರ ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಗ್ಯಾಸ್ ಬಂಕ್ ಆರಂಭಕ್ಕೆ ಆಟೋ ಚಾಲಕರ ಒತ್ತಾಯ
