ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಶ್ನಾವಳಿಗಳಿಗೆ ನಿರ್ದಿಷ್ಟ ಪಡಿಸಿದ ಕಾಲಾವಧಿಯಲ್ಲಿ ಉತ್ತರಿಸುವುದಾಗಿ ಮಾತು ಕೊಟ್ಟು ವಿಫಲವಾಗಿರುವ ಅರಣ್ಯ ಅಧಿಕಾರಿಗಳ ಕೃತ್ಯ ಖಂಡನಾರ್ಹ. ತೀವ್ರ ತರದ ಹೋರಾಟ ಅನಿವಾರ್ಯವೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಶಿರಸಿ ಅರಣ್ಯ ಸಿಬ್ಬಂದಿಗಳಿಂದ ಅರಣ್ಯವಾಸಿಗಳಿಗೆ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ, ಅರಣ್ಯವಾಸಿಗಳಿಗೆ ಉಂಟಾಗುತ್ತಿರುವ ದೌರ್ಜನ್ಯ ಸ್ಪಷ್ಟೀಕರಣ ಬಯಸಿ ಫೇಬ್ರುವರಿ 28 ರಂದು ನೀಡಿದ ಲಿಖಿತ ಐದು ಪ್ರಶ್ನೆಗಳಿಗೆ ಉತ್ತರಿಸಲು ತೆಗೆದುಕೊಂಡ ಒಂದು ವಾರ ಕಾಲಾವಧಿ ಮುಗಿದರೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉತ್ತರಿಸದೇ ಮಾತು ತಪ್ಪಿರುವ ಹಿನ್ನೆಲೆಯಲ್ಲಿ ತೀವ್ರ ತರದ ಹೋರಾಟ ಅನಿವಾರ್ಯವೆಂದು ಅವರು ತಿಳಿಸಿದರು.
ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ಮತ್ತು ಆಸ್ತಿ ನಷ್ಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳ ಕೃತ್ಯಕ್ಕೆ ಸಂಬಂಧಿಸಿ, ಕಾನೂನು ಸ್ಪಷ್ಟೀಕರಣ ಬಯಸಿ ಮುಖ್ಯಮಂತ್ರಿ ಶಿರಸಿಗೆ ಬಂದಿರುವ ಫೇಬ್ರವರಿ 28 ರಂದು ಲಿಖಿತ ಪ್ರಶ್ನೆಗಳನ್ನು ನೀಡಲಾಗಿದ್ದು, ಸದ್ರಿ ಪ್ರಶ್ನೆಗಳಿಗೆ ಸಹಸ್ರಾರು ಅರಣ್ಯವಾಸಿಗಳ ಸಮಕ್ಷಮ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಮನವಿ ಸ್ವೀಕರಿಸಿ, ಉನ್ನತ ಪೋಲೀಸ್ ಅಧಿಕಾರಿಗಳ ಸಮಕ್ಷಮ ಒಂದು ವಾರ ಕಾಲಾವಕಾಶ ಕೇಳಿದ್ದರೂ ಎಂದು ಅವರು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಅಧಿಭೋಗ ಮತ್ತು ಸಾಗುವಳಿ ಕ್ಷೇತ್ರಕ್ಕೆ ಒಕ್ಕಲೆಬ್ಬಿಸಬಾರದು ಮತ್ತು ಆತಂಕ ಪಡಿಸಬಾರದು, ಒಕ್ಕಲೆಬ್ಬಿಸುವ ಪೂರ್ವ ಕರ್ನಾಟಕ ಅರಣ್ಯ ಕಾಯಿದೆ ಕಲಂ 64 ಎ ಪ್ರಕ್ರಿಯೆ ಜರುಗಿಸಬೇಕು, ಅರಣ್ಯವಾಸಿಯ ಸಾಗುವಳಿಗೆ ಮತ್ತು ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಆತಂಕ ಪಡಿಸಬಾರದು, ಅರಣ್ಯವಾಸಿಗಳ ಮೇಲೆ ದೈಹಿಕ ಹಿಂಸೆ ಮಾಡಬಾರದು, ಅವಾಚ್ಯ ಶಬ್ದ ಬಳಸಬಾರದು ಹಾಗೂ ಮಾನಸಿಕ ಕಿರುಕುಳ ನೀಡಬಾರದು, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರ ಮೇಲೆ ಒಕ್ಕಲೆಬ್ಬಿಸುವ ನೋಟೀಸ್ ಮತ್ತು ಒಕ್ಕಲೆಬ್ಬಿಸುವ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಪ್ರಶ್ನಾವಳಿಯಲ್ಲಿ ಪ್ರಶ್ನಿಸಲಾಗಿತ್ತು.