ಯಲ್ಲಾಪುರ: ಮನುಷ್ಯರಂತೆ ಪ್ರಾಣಿಗಳು ಸುಖವಾಗಿರಬೇಕು. ಅವುಗಳಿಗೂ ಬದುಕುವ ಹಕ್ಕಿದೆ. ಮನುಷ್ಯ ಜಾನುವಾರಗಳ ಮೇಲೆ ಅವಲಂಬಿತವಾಗಿ ಬದುಕು ಸಾಗಿಸುತ್ತಿದ್ದಾನೆ. ಹೀಗಾಗಿ ಪ್ರಾಣಿಗಳ ಹತ್ಯೆ, ಹಿಂಸೆ ಸಲ್ಲದು ಎಂದು ಕರಡೊಳ್ಳಿ ಗೋಶಾಲೆಯ ಅಧ್ಯಕ್ಷ ಎಮ್.ಎನ್.ಭಟ್ ಹೇಳಿದರು.
ಪಶುಸಂಗೋಪನಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘ, ಪ್ರಾಣಿ ಕಲ್ಯಾಣ, ಪ್ರಾಣಿ ಹಿಂಸೆ ತಡೆಗಟ್ಟುವ ಹಾಗೂ ಗೋ ಹತ್ಯಾಪ್ರತಿಬಂಧಕ ಕಾನೂನುಗಳ ಕುರಿತ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ತಿಪ್ಪಣ್ಣ ತಳಕಲ್ ಮಾತನಾಡಿ, 2022ರ ಫೆ.22ರಂದು ಗೋಹತ್ಯೆ ಕಾನೂನು ಜಾರಿಗೆ ಬಂದಿದೆ. ಪಶು ಆಹಾರವನ್ನು ಮಾರಾಟ ಮಾಡುವುದರಿಂದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರಾಣಿಗಳನ್ನು ಸಾಗಾಣಿಕೆ ಮಾಡಲು ಕೂಡ ಪ್ರಾಣಿ ದಯಾ ಸಂಘದ ಪರವಾನಗಿ ಅಗತ್ಯವಾಗಿ ಬೇಕಾಗಿದೆ ಎಂದರು.
ಡಾ.ಸುಬ್ರಾಯ ಭಟ್ ಪ್ರಾಸ್ತಾವಿಕ ಮಾತನಾಡಿ, ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಬೀದಿ ನಾಯಿಯನ್ನು ನಾವು ಸಾಗಾಟ ಮಾಡಲಾಗದು. ಗಿಳಿ ಸಾಕುವಾಗಲು ನಮಗೆ ಕಾನೂನು ಅರಿವು ಹೊಂದಿರಬೇಕು. ಜನರಲ್ಲಿ ಪ್ರಾಣಿಗಳ ಕುರಿತು ಜಾಗೃತಿ ಮೂಡಿಸಲು ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪಶು ಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ಗೋವಿಂದ ಎಸ್.ಭಟ್ ಉಪನ್ಯಾಸ ನೀಡಿ, ನಿಷೇಧಿತ ನಾಯಿಗಳನ್ನು ಸಾಕುವಾಗ ಅವುಗಳನ್ನು ನಿರ್ವಹಿಸುವಾಗ ಕಾನೂನು ಪಾಲನೆ ಅಗತ್ಯವಾಗಿದೆ. ಮಾನವ ಮತ್ತು ಪ್ರಾಣಿಗಳ ಮಧ್ಯ ಆಗಾಗ ಸಂಘರ್ಷ ಮುಂದುವರೆಯುತ್ತಲೇ ಬಂದಿದೆ. ಪ್ರಾಣಿಗಳಿಗೂ ಅವುಗಳ ರೀತಿಯಲ್ಲಿ ಬದುಕುವ ಹಕ್ಕಿದೆ. ಸಾಕು ಪ್ರಾಣಿಗಳ ಸಾಕಾಣಿಕೆಯಲ್ಲಿಯೂ ಹಲವು ನಿಯಮಗಳಿದ್ದು, ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದರು.
ಪ್ರಾಣಿಗಳನ್ನು ನಿರ್ವಹಿಸುವ ವಿಧಾನದಿಂದ ದೇಶದ ಹಿರಿಮೆ ನಿಂತಿದೆ. ಸಿಂಧೂ ನಾಗರಿಕತೆಯಷ್ಟು ಹಿಂದೆಯೇ ಗೋ ಪೂಜೆ ನಡೆಯುತ್ತಿತ್ತು. 1962 ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, 2019ರಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ರಾಜ್ಯದಲ್ಲಿನ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಲ್ಲಿ ಪ್ರಾಣಿ ಸಂತಾನೋತ್ಪತ್ತಿ, ಸಂಶೋಧನೆ ಅಥವಾ ಪ್ರಯೋಗಕ್ಕಾಗಿ ಸ್ಥಾಪಿಸಲಾದ ಅನಿಮಲ್ ಪಾರ್ಮ್ಗಳಲ್ಲಿ ಪ್ರಾಣಿಗಳ ಮೇಲೆ ಅನಗತ್ಯ ನೋವು ಅಥವಾ ಸಂಕಟವನ್ನು ಉಂಟುಮಾಡುವ ಕಾರ್ಯಗಳಿಗೆ ನಿರ್ಬಂಧವಿದೆ. ಅನಾರೋಗ್ಯ ಮತ್ತು ಗಾಯಗೊಂಡ ಪ್ರಾಣಿಗಳಿಗೆ ಪಶುವೈದ್ಯಕೀಯ ಸಹಾಯವನ್ನು ನೀಡುವುದು, ಪಶುವೈದ್ಯಕೀಯ ಔಷಧಾಲಯಗಳು, ಪಶುವೈದಕೀಯ ಆಸ್ಪತ್ರೆಗಳು, ಪ್ರಾಣಿ ಚಿಕಿತ್ಸಾಲಯಗಳು ಮತ್ತು ಪ್ರಾಣಿಗಳ ಅಂಬ್ಯುಲೆನ್ಸ್ ಮತ್ತು ಇತರ ವಿಧಾನಗಳನ್ನು ಸ್ಥಾಪಿಸುವುದು, ವೃದ್ಧಾಪ್ಯದ ಕಾಯಿಲೆ ಅಥವಾ ಗಾಯದ ಕಾರಣದಿಂದ ಕೆಲಸ ಮಾಡಲು ಅಸಮರ್ಥವಾಗಿರುವ ಪ್ರಾಣಿಗಳಿಗೆ ಪ್ರಾಣಿಗಳ ಆಶ್ರಯ, ಪಿಂಜರಪೋಲ್‌ಗಳ್ಳಿ ವ್ಯವಸ್ಥೆ. ನೀರಿನ ತೊಟ್ಟಿಗಳನ್ನು ಸ್ಥಾಪಿಸುವುದು. ಇತರ ಸೌಕರ್ಯಗಳನ್ನು ಸ್ಥಾಪಿಸುವುದು ಪ್ರಾಣಿ ಕಲ್ಯಾಣ ಮಂಡಳಿಯ ಕಾರ್ಯಗಳಾಗಿದೆ ಎಂದು ಹೇಳಿದರು.
ಕಚೇರಿ ಸಿಬ್ಬಂದಿಗಳಾದ ರೇಖಾ ಹಾಗೂ ರೇಷ್ಮಾ ಪ್ರಾರ್ಥಿಸಿದರು. ಡಾ. ರಾಜೇಶ ಸ್ವಾಗತಿಸಿ, ನಿರೂಪಿಸಿದರು.