Slide
Slide
Slide
previous arrow
next arrow

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷಿತ ವ್ಯವಸ್ಥೆ ಕಲ್ಪಿಸಲು ಮನವಿ

300x250 AD

ಕುಮಟಾ: ಪಟ್ಟಣ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಜನವಾಹನ ಸಂಚಾರಕ್ಕೆ ಸೂಕ್ತ ಸುರಕ್ಷಿತ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಕೋರಿ ಕುಮಟಾ ವಿಕಾಸ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ವಿವೇಕ ಶೇಣ್ವಿ ಅವರಿಗೆ ಸಾರ್ವಜನಿಕ ಮನವಿ ಸಲ್ಲಿಸಲಾಯಿತು.
ಕುಮಟಾ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಜಿಲ್ಲೆಯ ಮಧ್ಯವರ್ತಿ ಸ್ಥಳ, ಪ್ರವಾಸೋದ್ಯಮ ಹಾಗೂ ಇತರ ಕಾರಣಗಳಿಗಾಗಿ ಮೂಲಭೂತ ಸೌಕರ್ಯಗಳ ವಿಸ್ತರಣೆ ಮತ್ತು ಹಲವು ಬಗೆಯ ವ್ಯವಸ್ಥೆಗಳ ಅಗತ್ಯತೆ ವರ್ಷದಿಂದ ವರ್ಷಕ್ಕೆ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಗೃಹಗಳಿಲ್ಲ. ಇದರಿಂದ ವೃದ್ಧರು, ಮಕ್ಕಳು, ಮಹಿಳೆಯರಿಗೆ ತೀವ್ರ ಅನಾನುಕೂಲತೆ ಆಗುತ್ತಿದೆ. ಕಳೆದ ಎರಡು ದಶಕಗಳಿಂದ ಪ್ರಮುಖ ನಾಗರಿಕ ಸೌಲಭ್ಯಗಳು ಆಮೆಗತಿಯಲ್ಲಿದೆ. ಕುಡಿಯುವ ನೀರು, ನಿರಂತರ ವಿದ್ಯುತ್ ವ್ಯವಸ್ಥೆಗೆ ಪದೇಪದೇ ಅಡಚಣೆಗಳಾಗುತ್ತಿದೆ. ರಸ್ತೆ ಬದಿಗೆ ಗಿಡಗಂಟಿ ಮುಳ್ಳು ಬೆಳೆದು, ಗಟಾರ ಮುಚ್ಚಿದ್ದರೂ ಸ್ವಚ್ಛತೆ ಇಲ್ಲ. ಮಳೆಗಾಲದಲ್ಲಿ ನೀರು ಕಟ್ಟಿಕೊಂಡು ರಸ್ತೆಯ ಮೇಲೆ ಹರಿಯುವ ಕಡೆಗಳಲ್ಲಿ ಪ್ರತಿವರ್ಷ ಸಮಸ್ಯೆ ಹಾಗೇ ಇದೆ ಎಂದು ಮನವಿಯಲ್ಲಿ ವಿವರಿಸಲಾಯಿತು.
ಪಟ್ಟಣದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಅತೀವವಾಗಿದ್ದು, ಸಾರ್ವಜನಿಕರ ಓಡಾಟದ ಜತೆಗೆ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಅಸಹಾಯಕರು ರಸ್ತೆ ದಾಟುವಲ್ಲಿ ಅಸುರಕ್ಷಿತತೆ ಅನುಭವಿಸುತ್ತಿದ್ದಾರೆ. ಪಟ್ಟಣದ ಒಳರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಸೇರುವ ಭಾಗದಲ್ಲಿ ರಾ.ಹೆದ್ದಾರಿಯಲ್ಲಿ ಯಾವುದೇ ಸೂಕ್ತ ವ್ಯವಸ್ತೆ ಇಲ್ಲದಿರುವದರಿಂದ ಅಪಘಾತಗಳು ಘಟಿಸುತ್ತಿವೆ. ಹೊಳೆಗದ್ದೆ ಟೋಲ್‌ನಲ್ಲಿ ಸುಂಕ ವಸೂಲಿ ಆರಂಭವಾಗಿ ವರ್ಷಗಳು ಕಳೆದರೂ ರಸ್ತೆ ವಿಭಾಜಕ, ಸರ್ವಿಸ್ ರಸ್ತೆ, ಫುಟ್‌ಪಾತ್, ಚರಂಡಿ, ಕೆಳ/ಮೇಲು ಸೇತುವೆಗಳು ಮುಂತಾದ ವ್ಯವಸ್ಥೆಗಳಿಲ್ಲ. ಹೆಗಡೆ ಕ್ರಾಸ್‌ನಿಂದ ಹೊನ್ಮಾಂವ ಕ್ರಾಸ್‌ವರೆಗೂ ಅಗತ್ಯವಿರು ಕಡೆಗಳಲ್ಲಿ ಕೆಳ ಅಥವಾ ಮೇಲು ಸಏತುವೆ ನಿರ್ಮಿಸಿ ಜನ- ವಾಹನ ಸಂಚಾರ ಅಪಾಯರಹಿತಗೊಳಿಸಬೇಕಿದೆ ಎಂದು ಒತ್ತಾಯಿಸಲಾಗಿದೆ.
ಸಂಘದ ಸಂಚಾಲಕ ದತ್ತಾತ್ರಯ ಭಟ್ಟ ನೇತೃತ್ವದಲ್ಲಿ ಶ್ರೀಕಾಂತ ನಾಯ್ಕ, ಮಂಜುನಾಥ ಭಟ್ಟ, ಚಂದ್ರು ಕರ್ಕಿ, ವಿನಾಯಕ ಗೌಡ, ದಾಮೋದರ ಶೆಟ್ಟಿ, ಕೆ.ಬಿ.ಭಂಡಾರಿ, ಅನಂತ ಗೌಡ, ಮಂಜುನಾಥ ನಾಯ್ಕ ಇನ್ನಿತರ ನೂರಾರು ಮಂದಿ ನಾಗರಿಕರು ಸಹಿ ಮಾಡಿದ ಮನವಿಯನ್ನು ಸಲ್ಲಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top