ಯಲ್ಲಾಪುರ: ಜೆಪಿಎನ್ ಪ್ರತಿಷ್ಠಾನ ನೀಡಿದ ಸೌಲಭ್ಯ ಪಡೆದು ಶಿಕ್ಷಿತರಾಗುವುದರ ಜೊತೆಗೆ ಸಮಾಜವನ್ನು ಸಂಘಟಿಸುವುದು. ಒಳ್ಳೆಯ ಕೆಲಸ ಮಾಡುವ ಮನೋಧರ್ಮವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠದ ವಿಖ್ಯಾತಾನಂದ ಸ್ವಾಮಿಗಳು ನುಡಿದರು.
ಅವರು ಶನಿವಾರ ಎಪಿಎಂಸಿ ಅಡಿಕೆ ಭವನದಲ್ಲಿ ಬೆಂಗಳೂರಿನ ಜೆ ಪಿ ನಾರಾಯಣಸ್ವಾಮಿ ಪ್ರತಿಷ್ಠಾನ(ಜೆಪಿಎನ್‌ಪಿ), ಆರ್ಯ ಈಡಿಗ ಯುವ ನಾಮಧಾರಿ, ಬಿಲ್ಲವ ಅಭಿವೃದ್ಧಿ ಸಂಘಗಳ ಸಹಕಾರದೊಂದಿಗೆ ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಸಾನಿಧ್ಯವಹಿಸಿ, ಆಶಿರ್ವಚನ ನೀಡಿದರು.
ಬಹಳಷ್ಟು ಹಣವಂತರು ವಿದ್ಯಾವಂತರಲ್ಲಿ ಬೆರಳೆಣಿಕೆಯ ಜನ ಮಾತ್ರ ತಾವು ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ಹಿಂದಿರುಗಿಸುತ್ತಿದ್ದಾರೆ. ನಾರಾಯಣ ಗುರುಗಳು ವಿದ್ಯೆ ಪಡೆದು ಸ್ವತಂತ್ರರಾಗಿ ಸಂಘ ಜೀವಿಯಾಗಿ ಎಂದು ಹೇಳಿದ್ದರು. ವಿದ್ಯೆಯೊಂದಿಗೆ, ಬುದ್ದಿವಂತ, ವ್ಯವಹಾರಿಕ ಜ್ಞಾನ ಹೊಂದಿದ ವಿದ್ಯಾರ್ಥಿಗಳು ಭವಿಷ್ಯದ ನಾಗರಿಕರಾಗಬೇಕು. ಓದುವುದು ಮುಖ್ಯವಲ್ಲ ಓದಿಗೆ ಕಾರಣರಾದವರನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ನಮ್ಮಲ್ಲಿರುವ ಸಂಕುಚಿತ ಮನೋಭಾವ ತೊರೆದಾಗ ನಾವು ವಿಶಾಲ ಹೃದಯಿಗಳಾಗಲು ಸಾಧ್ಯ. ಜನರಲ್ಲಿ ನನಗೇನು ಸಿಗುತ್ತದೆ ಎಂದು ಎಣಿಸುವವರು ಹೆಚ್ಚು, ನಾವು ಏನನ್ನು ಸಮಾಜಕ್ಕೆ ಕೊಟ್ಟಿದ್ದೆವೆ ಎಂದು ಲೆಕ್ಕ ಮಾಡುವವರು ಕಡಿಮೆ. ನಮಗೆ ಯಾರು ಕೆಡುಕನ್ನು ಬಯಸುವರೋ, ಅಂತವರ ಏಳ್ಗೆಯನ್ನು ಬಯಸುವ ಗುಣ ನಮ್ಮದಾಗಬೇಕು. ನಮ್ಮ ಸಾಧನೆಗಳು ನಾನು ನನ್ನ ಕುಟುಂಬ ಎಂಬುದಕ್ಕೆ ಸೀಮಿತರಾಗದೆ, ಕನಿಷ್ಠ ಒಬ್ಬರಿಗಾದರು ಸಹಾಯ ಮಾಡುವ ಮನೋಭಾವನೆಯನ್ನು ವಿದ್ಯಾರ್ಥಿಗಳು ಈಗಿಂದಲೇ ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ಮಹಾ ಪೋಷಕರಾದ ಲತಾ ಸುಧಾಕರ ಮಾತನಾಡಿ, ಸ್ವತಂತ್ರ ಅವಲಂಬನೆ ಎಂದರೆ ತಾನು ಹಾಗೂ ತನ್ನ ಕುಟುಂಬಕ್ಕಷ್ಟೆ ಸೀಮಿತವಾಗಿರುವದಲ್ಲ. ಸ್ವಂತ ಕಾಲ ಮೇಲೆ ನಿಂತ ನಂತರ ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೆ ಸ್ವತಂತ್ರವಾಗುವುದು ಎಂದು ಅರ್ಥ. ಜೆ.ಪಿ.ನಾರಾಯಣಸ್ವಾಮಿ ತಾವು ಶಿಕ್ಷಣ ಪಡೆಯದಿದ್ದರು ಓದುವ ಹಸಿವು ಇರುವ ಮಕ್ಕಳ ಕನಸಿಗೆ ಬಣ್ಣ ಹಚ್ವುವ ಕೆಲಸ ಮಾಡಿದರು. ಅವರ ಇಂತಹ ಕಾರ್ಯಗಳು ನಮಗೆ ಪ್ರೇರಣೆಯಾಗಿದೆ. ಸಂಘ ಹಾಗೂ ಸಮಾಜದ ಅಭಿವೃದ್ಧಿಗೆ ಬೇರೆ ಬೇರೆ ದಾರಿ ಹಿಡಿಯದೇ ಒಂದೆ ಉದ್ದೇಶ ಹಾಗೂ ಮನಸ್ಸಿನಿಂದ ಸಂಘಟನೆಯನ್ನು ಎಲ್ಲರು ಸೇರಿ ಬಲಪಡಿಸಬೇಕು. ಎಲ್ಲರು ಸೇರಿ ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಿದರೇ ಸಂಘಟನೆ ಸಮಾಜ ಅಭಿವೃದ್ಧಿ ಆಗುತ್ತದೆ. ಶಿಕ್ಷಣ ಇಲ್ಲದೇ ಇರುವವರಿಗೆ ಹೇಗೆ ಸಹಾಯ ಮಾಡಬಹುದು ಎನ್ನುವುದರ ಕುರಿತು ಯೋಚಿಸಿ ಸಹಾಯ ಮಾಡಬೇಕು. ನಾನು ಪ್ರತಿನಿಧಿಸಿದ ಸಮಾಜಕ್ಕೆ ಏನನ್ನಾದರು ಕೊಡಬೇಕು ಎನ್ನುವ ಗುಣ ಬೆಳೆಸಿಕೊಳ್ಳುವಂತೆ, ಇಲ್ಲಿ ಪಡೆದ ವಿದ್ಯಾರ್ಥಿ ವೇತನ ಕೇವಲ ಶಿಕ್ಷಣಕ್ಕಾಗಿ ಮಾತ್ರ ಬಳಸಿಕೊಳ್ಳುವಂತೆ ಅವರು ಕರೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಜೆಪಿಎನ್ ಪ್ರತಿಷ್ಠಾನದ ಟ್ರಸ್ಟಿ ಕುಸುಮಾ ಅಜಯ ಮಾತನಾಡಿ, ಜೆಪಿ ನಾರಾಯಣಸ್ವಾಮಿಯವರ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಬಹಳ ಅವಶ್ಯವಾಗಿದೆ. ಯಾರೂ ಯಾಕಾಗಿ ಕೊಡುತ್ತಿದ್ದಾರೆ ಎನ್ನುವುದು ತಿಳಿದುಕೊಳ್ಳುವುದು ಬಹಳ ಅವಶ್ಯವಾಗಿದೆ. ಜೆ.ಪಿ ನಾರಾಯಣಸ್ವಾಮಿ ಬಹಳಷ್ಟು ಕಷ್ಟದಿಂದ ಮೇಲೆ ಬಂದವರು. ಅವರ ಹೆಸರಿನಲ್ಲಿ ಸಮಾಜಕ್ಕೆ ಏನನ್ನಾದರು ಕೊಡಬೇಕು ಅನ್ನುವ ಉದ್ದೇಶದಿಂದ ಅವರ ಪುತ್ರ ಜೆಪಿ ಸುಧಾಕರ ಜೆಪಿಎನ್ ಪ್ರತಿಷ್ಠಾನ ಸ್ಥಾಪಿಸಿದರು. ಕರ್ನಾಟಕದಾದ್ಯಂತ ಪ್ರತಿ ವಷÀð 80 ಲಕ್ಷ ರೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವೃದ್ಧರಿಗೆ ವೃದ್ದಾಪ್ಯವೇತನ, ಅನಾರೋಗ್ಯ ಪೀಡಿತರ ಚಿಕಿತ್ಸಾ ವೆಚ್ಚ, ಕೌಶಲ್ಯ ತರಬೇತಿ, ಕೊವಿಡ್ ಸಂತ್ರಸ್ತರಿಗೆ ಪರಿಹಾರ ಇನ್ನೂ ಮುಂತಾದ ಸೇವೆಗಳನ್ನು ನಮ್ಮ ಪ್ರತಿಷ್ಠಾನ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಪಿಎನ್ ಪ್ರತಿಷ್ಠಾನದ ಉ.ಕ ಮುಖ್ಯ ಸಂಚಾಲಕ ಡಾ.ನಾಗೇಶ ಎಚ್.ನಾಯ್ಕ ಕಾಗಲ್ ಮಾತನಾಡಿ, ನಾರಾಯಣ ಗುರುಗಳ ಆದರ್ಶ ನಮ್ಮೆಲ್ಲರ ಪರಿಪಾಲನೆಯಾಗಬೇಕು. ಯಾವುದೇ ಬಗೆಯ ನೆರವು ಪಡೆದವರು ಗುರುತರ ಹೊಣೆಗಾರಿಕೆಯಾದ ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಮರೆಯಬಾರದು ಎಂದರು.
ಶಿರಸಿಯ ಎಸ್ ಬಿ ನಾಯ್ಕ ಸ್ವಾಗತಿಸಿದರು, ಡಾ.ಸತೀಶಕುಮಾರ ನಾಯ್ಕ ನಿರೂಪಿಸಿದರು. ಕೊನೆಯಲ್ಲಿ ಮನೋಜ ನಾಯ್ಕ ಧಾರವಾಡ ವಂದಿಸಿದರು. ಬೆಂಗಳೂರು ಜೆಪಿಎನ್ ಪ್ರತಿಷ್ಠಾನದ ಖಜಾಂಚಿ ಎಂ.ಆರ್.ಪೂರ್ಣೇಶ ಮಾತನಾಡಿದರು. ಯಲ್ಲಾಪುರ ಟೀಡ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಮೋಹಿನಿ ಪೂಜಾರಿ, ಯಲ್ಲಾಪುರ ಜೆಪಿಎನ್ ಪ್ರತಿಷ್ಠಾನ ಸಂಚಾಲಕ ನವೀನ ಗುಣವಂತ ನಾಯ್ಕ, ಮಾಜಿ ತಾ.ಪಂ ಸದಸ್ಯ ನರಸಿಂಹ ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಸತೀಶ ಎಸ್ ನಾಯ್ಕ, ನಿವೃತ್ತ ಬ್ಯಾಂಕ್ ಅಧಿಕಾರಿ ಗಜಾನನ ನಾಯ್ಕ, ಧಾರವಾಡದ ಆನಂದ ಪೂಜಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.