ಕುಮಟಾ: ಪಟ್ಟಣದ ಪಿಡಬ್ಲುಡಿಯ 3 ಕೋಟಿ ರೂ. ಅನುದಾನದಲ್ಲಿ ವಿವಿಐಪಿ ಸರ್ಕ್ಯೂಟ್ ಹೌಸ್ ನಿರ್ಮಾಣ ಕಾಮಗಾರಿ ಮತ್ತು ಹೆಗಡೆ- ಮಿರ್ಜಾನ್ ನಡುವಿನ ಅಘನಾಶಿನಿ ನದಿಗೆ ಅಡ್ಡಲಾಗಿ 18.28 ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು, ಬಿಜೆಪಿ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ನಾನು ಈ ಭಾಗದ ಜಿಲ್ಲಾ ಉಸ್ತುವಾರಿಯಾದರೂ ಈ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕೈಗೊಂಡಿರುವುದು ಶಾಸಕ ದಿನಕರ ಶೆಟ್ಟಿ. ಈ ಕ್ಷೇತ್ರದ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ ಇದೆ. ಹಾಗಾಗಿ ಅವರು ಕುಮಟಾಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮಂಜೂರಿ ಮಾಡಿಸಿದ್ದಾರೆ. ಈ ಸಂಬಂಧ ಆರೋಗ್ಯ ಸಚಿವರು ಸೇರಿದಂತೆ ಸಿಎಂ ಬಳಿ ಹಲವು ಬಾರಿ ತೆರಳಿ ಮನವಿ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲೂ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗದಂತೆ ನೋಡಿಕೊಂಡಿದ್ದಾರೆ ಎಂದರೆ ದಿನಕರ ಶೆಟ್ಟಿಯವರ ಇಚ್ಛಾಶಕ್ತಿಯೇ ಕಾರಣ ಎಂದು ಶಾಸಕರ ಕಾರ್ಯ ವೈಖರಿಯ ಬಗ್ಗೆ ಗುಣಗಾನ ಮಾಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಬಾರ್ಡ್ ಯೋಜನೆಯಡಿ ಈ ಸೇತುವೆ ಕಾಮಗಾರಿಗೆ ಮಂಜೂರಾತಿ ಪಡೆದು, ಇಂದು ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಹೆಗಡೆ-ಮಿರ್ಜಾನ್ ನಡುವೆ ಸೇತುವೆಯಾದರೆ ಈ ಭಾಗದ ಜನರಿಗೆ ಪ್ರಯಾಣದಲ್ಲಿ ಸುಮಾರು 10 ಕಿಮೀ ಉಳಿತಾಯವಾಗಲಿದೆ. ಇನ್ನು ಕೋಡ್ಕಣಿ ಐಗಳಕುರ್ವೆ ಸೇತುವೆ, ಬೊಗ್ರಿಬೈಲ್ ಸೇತುವೆಯ ಸಂಪರ್ಕ ರಸ್ತೆಗೆ ಭೂ ಸ್ವಾಧೀನ ಮಾಡಿಲ್ಲ. ಹಾಗಾಗಿ ಆ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ಈ ಎರಡು ಸೇತುವೆಗಳ ಶಂಕುಸ್ಥಾಪನೆ ಮಾಡಿ ಹೋಗಿತ್ತು. ಈಗ ಅಲ್ಲಾದ ಸಮಸ್ಯೆಗೆ ನನ್ನನ್ನು ಹೊಣೆ ಮಾಡುತ್ತಿರುವುದು ಸರಿಯಲ್ಲ. ಆ ಸೇತುವೆಗಳಿಗೆ ಬೇಕಾದ ಹಣಕಾಸು ಒದಗಿಸಿಕೊಟ್ಟಿದ್ದು, ನಮ್ಮ ಸರ್ಕಾರ. ಅಲ್ಲದೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡ ನಾನೇ ಮಾಡಿಸಿ, ಮಂಜೂರಾತಿಗೆ ಕಳುಹಿಸಿದ್ದೇನೆ. ಸ್ವಲ್ಪ ಸಮಯ ಹಿಡಿಯಬಹುದು. ಇದನ್ನೆಲ್ಲ ಜನ ಅರಿತುಕೊಳ್ಳಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ನಾನು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಸುಳ್ಳು ಹೇಳುವವರನ್ನು ನಂಬುವ ಬದಲೂ ಕೆಲಸ ಮಾಡುವವರಿಗೆ ಸಾತ್ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಹೆಗಡೆ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಪಟಗಾರ, ಮಿರ್ಜಾನ್ ಗ್ರಾಪಂ ಅಧ್ಯಕ್ಷ ಪರಮೇಶ್ವರ ಪಟಗಾರ, ಬಿಜೆಪಿ ಮುಖಂಡರಾದ ಸುಬ್ರಾಯ ವಾಳ್ಕೆ, ವಿನೋದ ಪ್ರಭು, ಪ್ರಶಾಂತ ನಾಯ್ಕ, ಎಂ ಎಂ ಹೆಗಡೆ, ಗಣೇಶ ಅಂಬಿಗ, ಯೋಗೇಶ ಪಟಗಾರ, ತಹಸೀಲ್ದಾರ್ ವಿವೇಕ ಶೇಣ್ವಿ ಸೇರಿದಂತೆ ಪುರಸಭೆ ಸದಸ್ಯರು, ಗ್ರಾಪಂ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.