ಕುಮಟಾ: ತಾಲೂಕಿನ ನಾಡುಮಾಸ್ಕೇರಿಯ ಹೊಸನಗರದ ಬಡ ಮೀನುಗಾರ ಕುಟುಂಬಗಳ ಲಗತ್ತಿನಲ್ಲಿರುವ ಜಾಗದಲ್ಲಿ ರೆಸಾರ್ಟ್ ಉದ್ಯಮಿಯೋರ್ವ ನಿರ್ಮಿಸಿದ ಕಂಪೌಂಡ್ನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸದಿದ್ದರೆ ಸ್ಥಳೀಯ ಮೀನುಗಾರರು ಚುನಾವಣೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದಾರೆ.
ತಾಲೂಕಿನ ನಾಡುಮಾಸ್ಕೇರಿ ಗ್ರಾ.ಪಂ ವ್ಯಾಪ್ತಿಯ ಬಾವಿಕೊಡ್ಲದ ಹೊಸನಗರದ ಬಡ ಮೀನುಗಾರ ಕುಟುಂಬಗಳ ಲಗ್ತಿನಲ್ಲಿರುವ ಜಾಗದಲ್ಲಿ ರೆಸಾರ್ಟ ಉದ್ಯಮಿಯೊಬ್ಬರು ಅನಧಿಕೃತವಾಗಿ ಕಂಪೌಂಡ್ ನಿರ್ಮಿಸಿರುವುದರಿಂದ ಮೀನುಗಾರಿಕೆಗೆ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗಾಬೀತ ಸಮಾಜದ ಮೀನುಗಾರ ಕುಟುಂಬಗಳು ಅನಾದಿಕಾಲದಿಂದಲೂ ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತ ಬಂದಿದ್ದಾರೆ. ಇವರ ಜಮೀನಿನ ಪಕ್ಕದಲ್ಲಿರುವ ರೆಸಾರ್ಟ್ ಉದ್ಯಮಿಯೋರ್ವರು ಸಮುದ್ರದಿಂದ ಹರಿದು ಬಂದ ಜಾಗದಲ್ಲಿ ಕಳೆದ ಒಂದು ವರ್ಷದ ಹಿಂದೆ ಕಂಪೌಂಡ್ ನಿರ್ಮಿಸಿದ್ದಾರೆ. ಸಮುದ್ರವನ್ನೇ ನಂಬಿರುವ ಮೀನುಗಾರರು ತಮ್ಮ ಜಮೀನಿಗೆ ಲಗ್ತು ಇರುವ ಸಮುದ್ರದಿಂದ ಹರಿದು ಬಂದ ಜಾಗದಲ್ಲಿ ದೋಣಿ, ಬಲೆ ಸೇರಿದಂತೆ ಮೀನುಗಾರಿಕಾ ಸಲಕರಣೆಗಳನ್ನು ಇರಿಸಿಕೊಳ್ಳಲು ತೊಂದರೆಯಾಗಿದೆ. ಇದರಿಂದ ಮೀನುಗಾರಿಕಾ ವೃತ್ತಿಗೂ ಸಮಸ್ಯೆಯಾಗಿದೆ. ಈ ಬಗ್ಗೆ ರೆಸಾರ್ಟ್ ಉದ್ಯಮಿಯನ್ನು ಕೇಳಿದರೆ, ಅದು ನಿಮ್ಮ ಜಾಗವಲ್ಲ. ಈ ಬಗ್ಗೆ ಕಿರಿಕ್ ಮಾಡಿದರೆ ಪೊಲೀಸರಿಗೆ ದೂರು ಸಲ್ಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ಮೀನುಗಾರಿಕೆಯನ್ನು ವೃತ್ತಿಯನ್ನಾಗಿಸಿ ಜೀವನ ಸಾಗಿಸುತ್ತಿರುವ ನಮಗೆ ಇಲ್ಲಿ ಕಂಪೌಂಡ್ ನಿರ್ಮಿಸಿದ್ದರಿಂದ ಮೀನುಗಾರಿಕಾ ವೃತ್ತಿಗೆ ತೊಂದರೆಯಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಲ್ಲಿ ನಿರ್ಮಾಣವಾದ ಅನಧಿಕೃತ ಕಂಪೌಂಡ್ನ್ನು ತೆರವುಗೊಳಿಸಿ, ಮೀನುಗಾರರಿಗೆ ಅನುಕೂಲ ಕಲ್ಪಿಸಬೇಕೆಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ಸುಮಾರು 20 ಕುಟುಂಬಗಳು ಇದೇ ಜಾಗದಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯ ಹೂಡಿವೆ. ನಮಗೆ ಲಗ್ತು ಇರುವ ಜಾಗಕ್ಕೆ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣಕ್ಕೆ ಮುಂದಾಗಿದ್ದಾರೆ. ಈ ಅತಿಕ್ರಮಣವನ್ನು ತೆರವುಗೊಳಿಸಿ, ನಮಗೆ ನ್ಯಾಯ ದೊರಕಿಸಲು ಅಧಿಕಾರಿಗಳು ಮುಂದಾಗಬೇಕು. ಈ ಮೂಲಕ ಮೀನುಗಾರಿಕೆಗೆ ತೆರಳಲು ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ನಮ್ಮ ಗಾಬೀತ ಸಮಾಜದ ಸುಮಾರು 60 ರಿಂದ 70 ಮತದಾರರು ಇದ್ದು, ಮುಂಬರುವ ವಿಧಾನಸಭಾ ಚುನವಣೆಯನ್ನು ಬಹಿಷ್ಕರಿಸಿ, ನ್ಯಾಯಯುತ ಬೇಡಿಕೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಥಳೀಯ ಮೀನುಗಾರರಾದ ಸತ್ಯಭಾಮಾ ಚೋಡನಕರ, ಲಕ್ಷ್ಮಣ ಚೋಡನಕರ, ಲತಾ ಬಾಂದೇಕರ, ಭಾಗ್ಯವತಿ ಬಾಂದೇಕರ, ತಾರಾಮತಿ ಚೋಡನಕರ, ಸುರೇಶ ಅರುಂದೇಕರ, ಮಂಜುನಾಥ ಮೊರ್ಜೆ, ರುಕ್ಮೀಣಿ ಕುರ್ಲೆ, ನಿಖಿಲ ಚೋಡನಕರ, ಅಶೋಕ ಕುರ್ಲೆ, ಮಾದೇವ ಮೊರ್ಜೆ, ಪ್ರಮೋದ ಬಾಂದೇಕರ, ಆನಂದ ಚೋಡನಕರ, ಬಾಲಕೃಷ್ಣ ಅರುಂದೇಕರ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.