ಮುಂಡಗೋಡ: ಲೋಕಕಲ್ಯಾಣ ಹಾಗೂ ಸರ್ವತ್ರ ಶುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳಿಂದ ಒಳಗೂಡಿದ ಮಳಗಿಯ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಫೆ.28, ಮಂಗಳವಾರದಿಂದ ಮಾ.08 ಬುಧವಾರದವರೆಗೆ ನಡೆಯಲಿದೆ.
ಫೆ.28, ಮಂಗಳವಾರ ಸರ್ವಾಲಂಕಾರಭೂಷಿತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆಯು ದೇವಸ್ಥಾನದ ಎದುರಿನ ಮಂಟಪದಲ್ಲಿ ನಡೆಯಲಿದ್ದು,ನಂತರದಲ್ಲಿ ರಾಜೋಪಚಾರಾದಿ ವಿನಿಯೋಗಗಳು ನಡೆಯಲಿವೆ.
ಮಾ.1, ಬುಧವಾರ ಶ್ರೀ ದೇವಿಯ ರಥಾರೋಹಣ ಮೆರವಣಿಗೆ ಬೆಳಿಗ್ಗೆ 8-30 ರಿಂದ ಪ್ರಾರಂಭವಾಗಿ ಮಧ್ಯಾಹ್ನ 1-30 ರ ನಂತರ ಜಾತ್ರಾ ಸ್ಥಳದ ಪೀಠದಲ್ಲಿ ಸ್ಥಾಪನೆಯಾಗಲಿದೆ.ಮಾ.2 ರಿಂದ ಮಾ.7 ರವರೆಗೆ ಸೇವೆಗಳು ಪ್ರಾರಂಭವಾಗಲಿದ್ದು, ಹಣ್ಣು ಕಾಯಿ, ಹರಕೆ, ಕಾಣಿಕೆ, ತುಲಾಭಾರ, ವಗೈರೆ ಸೇವೆಗಳು ನಡೆಯಲಿದೆ. ಮಾ.8 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಮಾತ್ರ ಹಣ್ಣು-ಕಾಯಿ ಸೇವೆ ನಡೆಯಲಿದ್ದು, ಹರಾಜು ಕಾರ್ಯಕ್ರಮವು ಮಧ್ಯಾಹ್ನ 2-30 ರಿಂದ ನಡೆಯಲಿದೆ.
ಜಾತ್ರಾ ಪೆಂಡಾಲ್ನಲ್ಲಿ ಪ್ರತಿ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ದೇವಿಯ ಪುನರ್ಪ್ರತಿಷ್ಠಾಪನೆ ಮಾ.22, ಯುಗಾದಿಯ ದಿನ ಬೆಳಿಗ್ಗೆ 10-30 ರಿಂದ ಪ್ರಾರಂಭವಾಗಲಿದೆ ಎಂದು ಸಮಿತಿ ತಿಳಿಸಿದೆ.