ಅಂಕೋಲಾ: ಹೆಚ್ಚಿನ ಜನಪ್ರತಿನಿಧಿಗಳು ಗುತ್ತಿಗೆದಾರರ ಜನಪ್ರತಿನಿಧಿಯಾಗಿ ವಿಜೃಂಭಿಸುತ್ತಿದ್ದಾರೆಯೆ ಹೊರತು, ನಮ್ಮ ಕಲೆ, ಸಂಸ್ಕೃತಿ ಸಾಹಿತ್ಯ, ರೈತನ ಸಮಸ್ಯೆ, ಕಾರ್ಮಿಕನ ನೋವಿನ ಬಗ್ಗೆ ಸ್ಪಂದಿಸದೇ ಇರುವುದು ಸಮಕಾಲೀನ ಸಂದರ್ಭದ ದುರಾದೃಷ್ಟಕ್ಕೆ ಸಾಕ್ಷಿಯಾಗಿದೆ ಎಂದು ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ್ ನಾಯಕ ಆತಂಕ ವ್ಯಕ್ತಪಡಿಸಿದರು.
ಅವರು ಬೋಳೆ ಜಮಗೋಡದ ಶ್ರೀಮಾರಿಕಾಂಬಾ ದೇವಸ್ಥಾನದ 6ನೇ ವರ್ಷದ ವರ್ಧಂತಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪರಂಪರೆ, ಕಲೆ, ಸಾಹಿತ್ಯ, ಅಸಹಾಯಕರ ನೋವಿನ ಬಗ್ಗೆ ಅರಿವಿರುವ ಜನಪ್ರತಿನಿಧಿಯ ಅಗತ್ಯತೆ ನಮಗಿದೆ. ಕೇವಲ ಗುತ್ತಿಗೆದಾರರ ಪ್ರತಿನಿಧಿಯಾಗಿ ನಿಂತು ಸಮಾಜಕ್ಕೆ ಅನಿಷ್ಠವಾಗಿರುವ ಜನಪ್ರತಿನಿಧಿಗಳು ಕಂಟಕಪ್ರಾಯರಾಗಿದ್ದಾರೆ ಎಂದರು.
ನಿವೃತ್ತ ಡಿಸಿಪಿ ವಿನಯ ಗಾಂವಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆನಂದು ಆಗೇರರಂಥ ಅದ್ಭುತ ಯಕ್ಷಗಾನ ಭಾಗವತ ನಮ್ಮ ಅಂಕೋಲಾದಲ್ಲಿ ಇರುವುದೇ ಒಂದು ಹೆಮ್ಮೆ. ದಕ್ಷಿಣ ಕನ್ನಡದಲ್ಲಿ ಆನಂದು ಭಾಗವತರೆಂದರೆ ಉಕ ಜಿಲ್ಲೆಯ ಹೆಮ್ಮೆಯ ಗರಿಗೆ ವಜ್ರ ಪೋಷಿಸಿದಷ್ಟು ಪ್ರಕಾಶಮಾನವಾದ ವ್ಯಕ್ತಿತ್ವ ಎಂದರು.
ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಾನಂದ ನಾಯಕ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಯಕ್ಷಗಾನದ ಮೇರು ಕಲೆಗೆ ಆನಂದು ಭಾಗವತರು ಅದ್ಭುತ ಕೊಡುಗೆ ನೀಡುತ್ತಾ ನಮ್ಮ ಸಂಸ್ಕೃತಿ- ಪರಂಪರೆಯನ್ನು ಗಟ್ಟಿಗೊಳಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಅಪರೂಪದ ಮನುಷ್ಯ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಡಿಸಿಪಿ ವಿನಯ ಗಾಂವಕರ, ಪ್ರಾಚಾರ್ಯ ಶಿವಾನಂದ ನಾಯಕ ಹಾಗೂ ನ್ಯಾಯವಾದಿ ನಾಗರಾಜ್ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ, ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ ಬೋಳೆ, ಶೆಟಗೇರಿ ಗ್ರಾ.ಪಂ ಸದಸ್ಯ ಲಕ್ಷ್ಮೀಧರ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿರೇಂದ್ರ ವಂದಿಗೆ ಸ್ವಾಗತಿಸಿದರು. ಶಿಕ್ಷಕ ರಾಜೇಶ ನಾಯಕ ನಿರೂಪಿಸಿದರು. ಕಾರ್ಯಕ್ರಮದ ಸಂಘಟಕ ಭಾಗವತರಾದ ಆನಂದು ಆಗೇರ ವಂದಿಸಿದರು. ಸತೀಶ ಆಗೇರ, ಸಂದೀಪ ಆಗೇರ, ಹರೀಶ ಆಗೇರ, ಪ್ರಜ್ವಲ ಆಗೇರ, ಪ್ರಕಾಶ ಆಗೇರ, ನಾರಾಯಣ ಆಗೇರ, ಮಂಜುನಾಥ ಆಗೇರ, ಸುರೇಶ ಆಗೇರ, ಗೋವಿಂದ ಆಗೇರ. ಉಪಸ್ಥಿತರಿದ್ದರು. ಗುಂದದ ಶ್ರೀ ಸಿದ್ದಿ ವಿನಾಯಕ ಮಹಿಳಾ ಯಕ್ಷಗಾನ ಮಂಡಳಿಯಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನವು ಯಕ್ಷಪ್ರೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.