ಶಿರಸಿ: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ. 28 ರಂದು ಶಿರಸಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅರಣ್ಯ ಕಚೇರಿಗೆ ಅರಣ್ಯವಾಸಿಗಳ ಭೇಟಿ ಮತ್ತು ಶಿರಸಿಯಿಂದ ಬನವಾಸಿಗೆ ಪಾದಯಾತ್ರೆ ಮೂಲಕ ಮುಖ್ಯಮಂತ್ರಿ ಅವರ ಭೇಟಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ನಿರ್ಣಯಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಇಂದು ಜರುಗಿದ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಿರಂತರ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟ ಮುಂದುವರೆಸಿದಾಗಲೂ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ತೀವ್ರ ತರದ ಹೋರಾಟ ಅನಿವಾರ್ಯವೆಂದು ಅವರು ಹೇಳುತ್ತಾ ಭೂಮಿ ಹಕ್ಕಿಗೆ ಹೋರಾಟದ ಮಾರ್ಗವೇ ಸೂಕ್ತ ಎಂದು ಅವರು ಉಲ್ಲೇಖಿಸಿದರು.
ಫೆ.28 ರಂದು, ಮುಂಜಾನೆ 10 ಗಂಟೆಗೆ, ಶಿರಸಿಯ ಹಳೇ ಬಸ್‌ಸ್ಟಾಂಡ್ ಸರ್ಕಲ್, ಗಾಂಧೀ ಪ್ರತಿಮೆಯ ಎದುರಿನಿಂದ ಅರಣ್ಯವಾಸಿಗಳು ಡಿ.ಎಫ್.ಒ ಕಚೇರಿಗೆ ಸಮಾಲೋಚಿಸಲು ಹೋರಡಲಿದ್ದು, ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ. ಅಲ್ಲದೇ, ಮುಖ್ಯಮಂತ್ರಿಗಳ ಭೇಟ್ಟಿಗಾಗಿ ಶ್ರೀ ಮಾರಿಕಾಂಬ ದೇವಾಲಯದ ಎದುರಿನಿಂದ ಪಾದಯಾತ್ರೆ ಮೂಲಕ ಮಧ್ಯಾಹ್ನ 2 ಗಂಟೆಗೆ ಹೊರಟು, ಸಂಜೆ 5 ಗಂಟೆಗೆ ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ತಲುಪಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಲಾಗುವುದೆಂದು ಅವರು ಹೇಳಿದರು.
ಸಭೆಯಲ್ಲಿ ದುಗ್ಗ ಮರಾಠಿ, ಲಕ್ಷ್ಮಣ ಮಾಳ್ಳಕ್ಕನವರ, ನೆಹರೂ ನಾಯ್ಕ ಬಿಳೂರು, ಇಬ್ರಾಹಿಂ ಗೌಡಳ್ಳಿ, ರಾಮು ಗೌಡ, ಎಮ್ ಆರ್ ನಾಯ್ಕ ಕಂಡ್ರಾಜಿ, ಶಿವಾಜಿ ಮೋಟರ್ಜಿ, ಬಾಬು ಮರಾಠಿ, ಚಂದ್ರಶೇಖರ್ ಭಂಡಾರಿ, ಅಶೋಕ ಆಚಾರಿ, ಗೋಪಾಲ ಗೌಡ ಮುಂತಾದವರು ಉಪಸ್ಥಿತರಿದ್ದರು.
ಪ್ರಮುಖ ಹತ್ತು ಬೇಡಿಕೆಗಳು:
ಸುಫ್ರೀಂಕೋರ್ಟಿನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸುವುದು, 1978ರ ಪೂರ್ವಕೇಂದ್ರ ಸರಕಾರದಿಂದ ಮಂಜೂರಿಗೆ ಶೀಫಾರಸ್ಸು ಆಗಿರುವ 2513 ಕುಟುಂಬಳಿಗೆ ಹಕ್ಕು ಪತ್ರ ನೀಡುವುದು, ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದು ಹಿಂದಕ್ಕೆ ಪಡೆಯುವುದು, ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳಿಂದ ಜರುಗುವ ದೌರ್ಜನ್ಯ ನಿಯಂತ್ರಿಸುವುದು, ಅರಣ್ಯವಾಸಿಗಳ ಮೇಲೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಮುಂತಾದ ಪ್ರಮುಖ ಹತ್ತು ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದೆಂದು ಅವರು ಹೇಳಿದರು.