ಕುಮಟಾ : ಬೇಡವೆಂದು ಎಸೆಯುವುದು ಸುಲಭ ಆದರೆ ಅದನ್ನು ಬೇಕೆಂಬಂತೆ ಬಳಸಿಕೊಳ್ಳುವುದು ಅತೀ ವಿರಳ, ಬೇಡವಾದದ್ದನ್ನು ಬೇಕೆಂಬಂತೆ ಬದಲಾಯಿಸುವುದೇ ನಿಜವಾದ ಜಾಣ್ಮೆ ಎಂದು ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಹೇಳಿದರು. ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ರಂಗಾ ದಾಸಾ ಶಾನಭಾಗ ಹೆಗಡೆಕರ ಬಾಲಮಂದಿರದವರು ಸಂಯೋಜಿಸಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ವಿದ್ಯಾರ್ಥಿಗಳ ನಡುವೆ ಹೋಲಿಕೆ ಮಾಡದೆ ಪ್ರತಿಯೊಬ್ಬರಲ್ಲಿರುವ ವೈಯಕ್ತಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕು. ಇಂದು ಇಲ್ಲಿ ಪಾಲಕರ ಸಹಕಾರದೊಂದಿಗೆ ಮಕ್ಕಳು ನಿಷ್ಪ್ರಯೋಜಕವಾದ ವಸ್ತುಗಳಿಂದ ಅತ್ಯಂತ ಮನೋಹರವಾಗಿ ಉಪಯುಕ್ತ ವಸ್ತುಗಳನ್ನಾಗಿ ಸಿದ್ಧಪಡಿಸಿರುವ ಕಲಾಕುಶಲತೆ ಮೆಚ್ಚುವಂಥದ್ದು. ಮಣ್ಣಿನ ಮುದ್ದೆಯಾಗಿರುವ ಮಕ್ಕಳನ್ನು ಮೂರ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರು ಶಿಕ್ಷಕರು ಹಾಗೂ ಆಡಳಿತ ಮಂಡಳಿಗಿದೆ. ಮಕ್ಕಳಿಗೆ ನಿರ್ದಿಷ್ಟ ಗುರಿಯನ್ನು ನೀಡುವ ಜೊತೆಗೆ ಅತ್ಯುತ್ತಮ ಸಂಸ್ಕಾರ ನೀಡುವಲ್ಲಿ ಮಾತೃಮಂಡಳಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯವಾಗಿದ್ದು ಮುಂದಿನ ಭವಿಷ್ಯ ರೂಪಿಸಲು ಅವರ ಕೊಡುಗೆ ಅನನ್ಯವಾದದ್ದು ಎಂದು ಅಭಿಪ್ರಾಯಪಟ್ಟರು.
ಯಾವುದಕ್ಕೂ ಉಪಯುಕ್ತವಲ್ಲ ಎಂದು ವಸ್ತುಗಳನ್ನು ತೆಗೆದು ಬಿಸಾಡುವ ಬದಲಾಗಿ ಅಂತಹ ವಸ್ತುಗಳನ್ನು ಸಂಗ್ರಹಿಸಿ ಈ ರೀತಿಯಲ್ಲಿಯೂ ಅಲಂಕರಿಸಬಹುದು ಎನ್ನುವುದನ್ನು ಪಾಲಕರು ಹಾಗೂ ವಿದ್ಯಾರ್ಥಿಗಳು ತೋರಿಸಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ಪುಟ್ಟ ಪುಟ್ಟ ಮನಸ್ಸುಗಳನ್ನು ಗುರಿಗೆ ಹೊಂದಿಸಿ ಪ್ರತಿಯೊಂದು ಮಗುವಿನ ಭವಿಷ್ಯವನ್ನು ಬೆಳಕಾಗಿಸಲು ನಾವೆಲ್ಲರೂ ಕೈಜೋಡಿಸಬೇಕೆಂದು ಅವರು ತಿಳಿಸಿದರು.
ಪುಟಾಣಿ ವಿದ್ಯಾರ್ಥಿಗಳು ಪಾಲಕರ ಸಹಾಯದಿಂದ ನಿಷ್ಪ್ರಯೋಜಕವಾಗಿ ಎಸೆಯಲ್ಪಡುವ ವಿವಿಧ ವಸ್ತುಗಳಿಂದ ತಯಾರಿಸಿದ ಕಸೂತಿಗಳು ಹಾಗೂ ಅರ್ಥಪೂರ್ಣ ಮಾದರಿಗಳು ನೋಡುಗರ ಹುಬ್ಬೇರಿಸುವಂತೆ ಮಾಡಿದ್ದವು.
ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್. ದೇಶಭಂಡಾರಿ ಇಂತಹ ಕಾರ್ಯಕ್ರಮವನ್ನು ಸಂಯೋಜಿಸಿದ ಶಿಕ್ಷಕ ವೃಂದದವರಿಗೆ, ಸಹಕರಿಸಿದ ಪಾಲಕರಿಗೆ ಧನ್ಯವಾದ ತಿಳಿಸಿದರು. ಬಾಲ ಮಂದಿರದ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ ಸ್ವಾಗತಿಸಿದರು. ಸರಸ್ವತಿ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕಿ ಸುಜಾತ ನಾಯ್ಕ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಹಾಜರಿದ್ದರು.