ಭಟ್ಕಳ: ತಾಲ್ಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಸೊಸೆಯ ಕುಟುಂಬದಿಂದಲೇ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಹಾಡುವಳ್ಳಿ ಒಣಿಬಾಗಿಲು ನಿವಾಸಿಗಳಾದ ಶಂಭು ಭಟ್ (70), ಅವರ ಪತ್ನಿ ಮಾದೇವಿ ಭಟ್(60), ಅವರ ಮಗ ರಾಘು (ರಾಜು ಭಟ್) (40) ಹಾಗೂ ಸೊಸೆ ಕುಸುಮಾ ಭಟ್(35) ಕೊಲೆಯಾದವರಾಗಿದ್ದಾರೆ. ಕೊಲೆಯಾದ ಶಂಭು ಭಟ್ಟರಿಗೆ ಶ್ರೀಧರ್ ಭಟ್ ಎನ್ನುವ ಮಗನಿದ್ದು, ವಿದ್ಯಾ ಭಟ್ ಎನ್ನುವವರಿಗೆ ಮದುವೆಯನ್ನ ಮಾಡಿಕೊಟ್ಟಿದ್ದರು. ಓಣಿಬಾಗಿಲು ಗ್ರಾಮದಲ್ಲಿ ಸುಮಾರು ಆರು ಎಕರೆ ತೋಟ ಹಾಗೂ ಕೃಷಿ ಭೂಮಿಯನ್ನ ಶಂಭು ಭಟ್ ಹೊಂದಿದ್ದರು. ಕಳೆದ ಆರು ತಿಂಗಳ ಹಿಂದೆ ಕ್ಯಾನ್ಸರ್ ನಿಂದ ಶ್ರೀಧರ್ ಭಟ್ ಮೃತಪಟ್ಟಿದ್ದು ಮೃತ ಪಟ್ಟ ಕೆಲವೇ ದಿನದಲ್ಲಿ ಆಸ್ತಿಯ ಪಾಲನ್ನ ವಿದ್ಯಾ ಭಟ್ ಗೆ ಕೊಡುವಂತೆ ಅವರ ಕುಟುಂಬದವರು ಶಂಭು ಭಟ್ ಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ.
ಆಸ್ತಿಯ ವಿಚಾರದಲ್ಲಿ ಶಂಭು ಭಟ್ ಹಾಗೂ ವಿದ್ಯಾ ಭಟ್ ಅವರ ಕುಟುಂಬದ ನಡುವೆ ಕಲಹ ನಡೆದು ಪ್ರಕರಣ ಭಟ್ಕಳ ಗ್ರಾಮೀಣ ಠಾಣಾ ಮೆಟ್ಟಲೇರಿದ್ದು ಪೊಲೀಸರ ಸಮ್ಮುಖದಲ್ಲಿಯೇ ಗಲಾಟೆಯನ್ನ ಬಗೆಹರಿಸಿ ಕಳಿಸಿದ್ದರಂತೆ. ಕೊಲೆಯಾದ ಶಂಭು ಭಟ್ ವಿದ್ಯಾ ಭಟ್ ಗೆ ಆಸ್ತಿಯನ್ನ ಸಹ ಕೊಟ್ಟಿದ್ದರು ಎನ್ನಲಾಗಿದೆ. ಶುಕ್ರವಾರ ವಿದ್ಯಾ ಭಟ್ಗೆ ನೀಡಿದ್ದ ತೋಟದಲ್ಲಿ ಎಲೆ ಬಳ್ಳಿಯಲ್ಲಿ ಎಲೆಯನ್ನ ಕೀಳಲು ಆಕೆಯ ಸಹೋದರ ವಿನಯ ಭಟ್ ಎಂಬಾತ ಬಂದಿದ್ದನು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಶಂಭು ಭಟ್ ಕುಟುಂಬಕ್ಕೂ ವಿನಯ್ ಭಟ್ ಕುಟುಂಬಕ್ಕೂ ಗಲಾಟೆ ಪ್ರಾರಂಭವಾಗಿದೆ ಎನ್ನಲಾಗಿದೆ.
ಇನ್ನು ಗಲಾಟೆ ವಿಕೋಪಕ್ಕೆ ತಿರುಗಿ ಶಂಭು ಭಟ್ , ಆತನ ಪತ್ನಿ ಮಾದೇವಿ ಭಟ್, ಮಗ ರಾಘು ಭಟ್ ಹಾಗೂ ಸೊಸೆ ಕುಸುಮಾ ಭಟ್ ರನ್ನ ಮಚ್ಚಿನಿಂದ ಹಲ್ಲೆ ಮಾಡಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಗಲಾಟೆಯಲ್ಲಿ ಆರೋಪಿ ವಿನಯ ಭಟ್ ತಂದೆ ಹಾಗೂ ಸಹೋದರಿ ವಿದ್ಯಾ ಭಟ್ ಸಹ ಸ್ಥಳದಲ್ಲಿ ಇದ್ದರು ಎನ್ನಲಾಗಿದ್ದು ಪೊಲೀಸರು ಸದ್ಯ ಆರೋಪಿಯನ್ನ ವಶಕ್ಕೆ ಪಡೆದಿದ್ದು, ತನಿಖೆಯನ್ನ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಯಕುಮಾರ್, ಸಿಪಿಐ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬದುಕುಳಿದ ಮಕ್ಕಳು
ಓಣಿಬಾಗಿಲು ಗ್ರಾಮದಲ್ಲಿ ನಡೆದ ಭೀಕರ ಕೊಲೆಯ ಸಂಧರ್ಭದಲ್ಲಿ ಮೃತ ರಾಘು ಭಟ್ ಹಾಗೂ ಕುಸಮಾ ಭಟ್ ದಂಪತಿಯ ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. ಕೃತ್ಯ ನಡೆಯುವ ವೇಳೆ ದಂಪತಿಯ ಹತ್ತು ವರ್ಷದ ಮಗು ಪಕ್ಕದ ಮನೆಯಲಿದ್ದ ಎನ್ನಲಾಗಿದೆ. ಇನ್ನು ನಾಲ್ಕು ವರ್ಷದ ಇನ್ನೊಂದು ಮಗು ಮಲಗಿದ್ದು ಹೀಗಾಗಿ ಇವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಂದೊಮ್ಮೆ ಈ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಇದ್ದರೇ ಆರೋಪಿ ಅವರನ್ನ ಕೊಲೆ ಮಾಡುತ್ತಿದ್ದ ಎನ್ನಲಾಗಿದ್ದು, ಇಡೀ ಕುಟುಂಬದವರು ಭೀಕರವಾಗಿ ಮೃತಪಟ್ಟಿರುವುದಕ್ಕೆ ಮಕ್ಕಳು ದಿಕ್ಕುತೋಚದಂತಾಗಿದ್ದಾರೆ ಎನ್ನಲಾಗಿದೆ.