ಕುಮಟಾ : ತಂದೆ ತಾಯಿಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿಯಲ್ಲಿ ಹುಟ್ಟಿದ ನಾವುಗಳು ಅವರ ಬದುಕಿಗೆ ಆಸರೆಯಾಗುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ ಭಟ್ ಹೇಳಿದರು. ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸರಸ್ವತಿ ವಿದ್ಯಾಕೇಂದ್ರದಲ್ಲಿ ಮಾತಾ ಪಿತೃ ಪೂಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಸ್ಕಾರ ಇಲ್ಲದಿದ್ದರೆ ಬದುಕು ಬರಡು. ಸಂಸ್ಕಾರವನ್ನು ರೂಢಿಸಿಕೊಳ್ಳವತ್ತ ಸರ್ವರೂ ಪ್ರಯತ್ನ ಮಾಡಬೇಕು. ತಂದೆ ತಾಯಿಗಳನ್ನು ಗೌರವಿಸುವುದು ಆದ್ಯ ಕರ್ತವ್ಯವಾಗಬೇಕು ಎಂದರು. ಮಕ್ಕಳಿಗೆ ಯಾವ ರೀತಿ ಅಭ್ಯಾಸ ಚಟುವಟಿಕೆ ನಡೆಸಬೇಕು ತಂದೆ ತಾಯಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬ ಬಗ್ಗೆ ನೈಜ ಫಟನಾವಳಿಗಳ ಮೂಲಕ ವಿವರಿಸಿದರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಮಾತಾ ಪಿತೃ ಪೂಜನದ ಮೂಲಕ ಮಕ್ಕಳಲ್ಲಿ ಸಂಸ್ಕಾರ ಬೆಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಜಿ.ವಿ ಭಟ್, ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್. ದೇಶಭಂಡಾರಿ, ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತಾ ನಾಯ್ಕ ಇದ್ದರು. ಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮ ಸ್ವಾಗತಿಸಿದರು. ಗೌರೀಶ ಭಂಡಾರಿ ನಿರೂಪಿಸಿದರು. ಐವತ್ತಕ್ಕೂ ಅಧಿಕ ಮಾತಾ ಪಿತೃರು ಹಾಜರಿದ್ದು ಮಕ್ಕಳಿಂದ ಪೂಜನ ಮಾಡಿಸಿಕೊಂಡರು.