ಯಲ್ಲಾಪುರ: ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದಲ್ಲಿ ಇತ್ತೀಚೆಗೆ `ವಾರ್ಷಿಕ ಸಹಕಾರ ಸಂಭ್ರಮ’ ಕಾರ್ಯಕ್ರಮ ಜರುಗಿತು.
ಇಲ್ಲಿನ ಸೇವಾ ಸಹಕಾರಿ ಸಂಘದಲ್ಲಿ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀರಾಜರಾಜೇಶ್ವರಿ ರಂಗಮಂದಿರದಲ್ಲಿ ಉಜಿರೆಯ ಕುರಿಯ ವಿಠ್ಠಲ ಶಾಸ್ತ್ರಿ ಪ್ರತಿಷ್ಠಾನದ ಕಲಾವಿದರು `ಭೀಷ್ಮ ಸೇನಾಧಿಪತ್ಯ-ಕರ್ಮಬಂಧ’ ಯಕ್ಷಗಾನ ತಾಳಮದ್ದಲೆಯನ್ನು ಪ್ರಸ್ತುತಪಡಿಸಿದರು.
ಭಾಗವತರಾಗಿ ಗೋಪಾಲಕೃಷ್ಣ ಭಾಗವತ ಜೋಗೀಮನೆ, ಮದ್ದಲೆಕಾರರಾಗಿ ಶಂಕರ ಭಾಗ್ವತ್ ಯಲ್ಲಾಪುರ ಕಾರ್ಯನಿರ್ವಹಿಸಿದರು. ಆಖ್ಯಾನದ ಕಲಾವಿದರಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ (ಭೀಷ್ಮ), ಡಾ.ಎಂ.ಪ್ರಭಾಕರ ಜೋಷಿ (ಕೃಷ್ಣ), ಅಶೋಕ ಭಟ್ಟ ಉಜಿರೆ (ಸುಯೋಧನ), ಎಂ.ಎನ್.ಹೆಗಡೆ ಹಳವಳ್ಳಿ (ಅರ್ಜುನ) ತಮ್ಮ ಕಲೆಯನ್ನು ಸಾದರಪಡಿಸಿದರು. ಉಮಾಕಾಂತ ಭಟ್ಟ ಕೆರೆಕೈ ಮತ್ತು ಯಕ್ಷಗಾನ ಸಮ್ಮೇಳನದ ಅಧ್ಯಕ್ಷ ಎಂ.ಪ್ರಭಾಕರ ಜೋಷಿ ಅವರನ್ನು ಸೇವಾ ಸಹಕಾರಿ ಸಂಘದವರು ಗೌರವಿಸಿದರು.