ಸಿದ್ದಾಪುರ: ಕೃಷ್ಣನ ಕಾಲದಿಂದ ಕೂಡ ಹುಣ್ಣಿಮೆಯ ಉತ್ಸವ ಯುಗಾದಿ ಉತ್ಸವ ನಡೆಯುತ್ತಿದ್ದುದು ನಾವು ಚರಿತ್ರೆಯಲ್ಲಿ ಕೇಳಿದ್ದೇವೆ. ಕುಬ್ಜವಾದಂತಹ, ಮಂದವಾದಂತ ಮನಸ್ಸಿಗೆ ಆನಂದವನ್ನು ನೆಮ್ಮದಿಯನ್ನು ಕೊಡುವಂತಹ ಜಾಗೃತ ಸ್ಥಿತಿಯೇ ಉತ್ಸವಗಳು. ನಾರಾಯಣ ಗುರುಗಳ ಏಕದೇವ, ಏಕಜಾತಿ ಪರಿಕಲ್ಪನೆ, ವಸುದೈವ ಕುಟುಂಬಕಂ ಕಲ್ಪನೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಾಕಾರವಾಗುತ್ತವೆ ಎಂದು ಧರ್ಮಸ್ಥಳ ಶ್ರೀರಾಮಕ್ಷೇತ್ರದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ನೆಹರೂ ಮೈದಾನದಲ್ಲಿ ಸಿದ್ದಾಪುರ ಉತ್ಸವ ಸಮಿತಿ ಆಯೋಜಿಸಿದ್ದ ‘ಸಿದ್ದಾಪುರ ಉತ್ಸವ-2023’ಕ್ಕೆ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಸ್ವಾಸ್ಥ ಸಮಾಜಕ್ಕೆ ಇಂಥ ಚಟುವಟಿಕೆಗಳೇ ಅವಶ್ಯ. ನಾವೆಲ್ಲ ಸುಖ ಶಾಂತಿ ನೆಮ್ಮದಿಯಿಂದಿರಬೇಕೆಂದು ಈ ದೇಶದಲ್ಲಿ ಇಂತಹ ಕೈಂಕರ್ಯಗಳು ನಡೆಯುತ್ತಿವೆ. ಈ ಉತ್ಸವದಲ್ಲಿ ಪ್ರಾದೇಶಿಕವಾದ ವ್ಯವಸ್ಥೆಯಲ್ಲಿ ಇರುವಂತಹ ಜನರ ವಿಚಾರಧಾರೆಗಳಿರಬಹುದು, ಅವರ ಕಲೆಗಳು ಅವರ ಬದುಕಿನ ಆಯಾಮಗಳು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತಹ ಜಾಗೃತ ಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕೆ ನಾವು ಪ್ರಚೋದನೆಯನ್ನು ಕೊಡದೆ ಹೋದಲ್ಲಿ ಆ ಭಾಗದ ಕಲೆಗಳಿರಬಹುದು ಜ್ಞಾನ ಇರಬಹುದು ನಶಿಸುವ ಸಾಧ್ಯತೆ ಇದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿಯ ಮಿರ್ಜಾನ್ ಶಾಖಾಮಠದ ನಿಶ್ಚಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಆಯಾ ಪ್ರಾಂತಗಳಲ್ಲಿ ಆಯಾ ಪ್ರಾಂತದ ಹೆಸರಿನಲ್ಲಿ ವೈಭವಗಳು ಉತ್ಸವಗಳು ನಡೆಯುತ್ತವೆ. ನಾವು ನಡೆದಂತೆ ನುಡಿದಂತೆ ಮಕ್ಕಳು ನೋಡಿ ಕಲಿಯುತ್ತಾರೆ. ಆದ್ದರಿಂದ ಮನೆಯಲ್ಲಿ ಹಿರಿಯರು ಯಾವುದೇ ರೀತಿ ಅಸಭ್ಯವಾಗಿ ನಡೆದುಕೊಳ್ಳುವುದು ಮಾತನಾಡುವುದು ಮಾಡಬಾರದು. ಮಕ್ಕಳನ್ನು ಸಂಸ್ಕಾರ ವಂತರಾಗಿ ಬೆಳೆಸೋಣ. ಪರಿವರ್ತನೆ ಜಗದ ನಿಯಮ ಅದರೊಂದಿಗೆ ಹೊಂದಿಕೊಂಡು ಹೋಗಬೇಕಾಗಿರುವುದು ಮಾನವನ ಸಹಜ ಧರ್ಮ. ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇದ್ದೇ ಇದೆ. ಆದರೆ ಆ ಸ್ಪರ್ಧೆ ಆರೋಗ್ಯಕರವಾಗಿರಬೇಕು ಎಂದರು.
ಡಾ.ಕೆ.ಶ್ರೀಧರ ವೈದ್ಯ ಮಾತನಾಡಿದರು. ಸುಧೀರ ಬೇಂಗ್ರೆ ಪ್ರಾರ್ಥಿಸಿದರು. ,ಸಿದ್ದಾಪುರ ಉತ್ಸವ ಸಮಿತಿ ಗೌರವಾಧ್ಯಕ್ಷ ಉಪೇಂದ್ರ ಪೈ ಬಾಳೂರು ಸ್ವಾಗತಿಸಿದರು.ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಪ್ರಾಸ್ತಾವಿಕ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ವಂದಿಸಿದರು. ಜಿ.ಜಿ.ಹೆಗಡೆ ಬಾಳಗೋಡ ಮತ್ತು ಅರುಣಕುಮಾರ ಕಾರ್ಯಕ್ರಮ ನಿರ್ವಹಿಸಿದರು.
ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಉಪೇಂದ್ರ ಪೈ ಬಾಳೂರು, ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪಿ.ಬಿ.ಹೊಸೂರು, ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ.ಪಾಟೀಲ್, ಸಿದ್ದಾಪುರ ಉತ್ಸವ ಸಮಿತಿ ಉಪಾಧ್ಯಕ್ಷರುಗಳಾದ ನಾಗರಾಜ ಆರ್.ನಾಯ್ಕ ಬೇಡ್ಕಣಿ, ಸತೀಶ ಹೆಗಡೆ ಬೈಲಳ್ಳಿ, ವೀರಭದ್ರ ನಾಯ್ಕ ಮಳವಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಆಕಾಂಶ ಎಸ್.ಕೆ., ವಿನಾಯ್ಕ ನಾಯ್ಕ ಕೊಂಡ್ಲಿ, ಎಚ್.ಕೆ.ಶಿವಾನಂದ, ಸ್ವಾಗತ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ, ಉಪಾಧ್ಯಕ್ಷ ಶಿರೀಷ ಎಂ.ಬೆಟಗೇರಿ, ವೇದಿಕೆ ಸಮಿತಿ ಅಧ್ಯಕ್ಷ ರವಿಕುಮಾರ ವಿ.ನಾಯ್ಕ ಜಾತಿಕಟ್ಟಾ, ಉಪಾಧ್ಯಕ್ಷ ಮಂಜುನಾಥ ನಾಯ್ಕ ತ್ಯಾರ್ಸಿ ಉಪಸ್ಥಿತರಿದ್ದರು.