ಕಾರವಾರ: ಕ್ಯಾನ್ಸರ್ ಅಂತಂದ್ರೆ ಗುಣಪಡಿಸಲಾಗದ ಕಾಯಿಲೆ. ಇದರ ಚಿಕಿತ್ಸೆ ಕೂಡ ಲಕ್ಷಾನುಗಟ್ಟಲೆ ವೆಚ್ಚದಾಯಕ. ಹೀಗಾಗಿ ಕ್ಯಾನ್ಸರ್ ಬಂದವರಿಗೆ ಸಾವೇ ಗತಿ ಎಂಬ ತಪ್ಪು ತಿಳುವಳಿಕೆಗಳು ಸಾಮಾನ್ಯ ಜನರಲ್ಲಿದೆ. ಆದರೆ ಈ ರೀತಿಯ ತಪ್ಪು ತಿಳುವಳಿಕೆಗಳನ್ನ ಹೋಗಲಾಡಿಸಿ, ಜನರಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸುವುದರ ಜೊತೆಗೆ ಬಡ- ಮಧ್ಯಮ ವರ್ಗದ ಜನರೂ ಕ್ಯಾನ್ಸರ್ ಚಿಕಿತ್ಸೆ ಪಡೆದು ಗುಣಮುಖವಾಗಲು ‘ಕ್ಯಾನ್ ವಿನ್’ ಎಂಬ ಐವರು ವೈದ್ಯರ ತಂಡವೊಂದು ಸದ್ದಿಲ್ಲದೆ ಶ್ರಮಿಸುತ್ತಿದೆ.
ಏನಿದು ‘ಕ್ಯಾನ್ ವಿನ್’?: ತಲೆ ಮತ್ತು ಕುತ್ತಿಗೆ ಕ್ಯಾನ್ಸರ್, ಎದೆಗೂಡಿನ ಕ್ಯಾನ್ಸರ್, ಗ್ಯಾಸ್ಟ್ರೋಡ್ಯುಯೇಡನಲ್ ಕ್ಯಾನ್ಸರ್, ಯಕೃತ್ತು, ಮೇದೋಜೀರಕಗ್ರಂಥಿ, ಕೋಲೋರೆಕ್ಟಲ್, ಎದೆಗೂಡು ಮತ್ತು ಕಿಬ್ಬೊಟ್ಟೆಯ ಕ್ಯಾನ್ಸರ್‌ಗೆ ಕೀಮೊ ಸರ್ಜರಿ (ಎಂಐಎಸ್)ಗಳನ್ನ ಮಾಡುವಲ್ಲಿ ಡಾ.ಅಜಯ್‌ಕುಮಾರ್ ವಿಶೇಷ ತಜ್ಞರು. ಅವರ ಪತ್ನಿ ಡಾ.ಸಂಗೀತಾ ಕೆ. ಅವರು ಕೂಡ ಸ್ತ್ರೀಯರಿಗೆ ಸಂಬಂಧಿಸಿ ಸ್ತನ, ಅಂಡಾಶಯ, ಗರ್ಭಕೋಶ, ಗರ್ಭಕಂಠದ ಕ್ಯಾನ್ಸರ್‌ನಲ್ಲಿ ವಿಶೇಷ ತಜ್ಞರು. ಇವರಿಬ್ಬರೂ ಗುಜರಾತ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಜಿಸಿಆರ್‌ಐ)ಯಲ್ಲಿ ಕ್ಯಾನ್ಸರ್ ತಜ್ಞರಾಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಜಿಸಿಆರ್‌ಐನಲ್ಲಿ ನಿತ್ಯವೂ 300- 400 ಕ್ಯಾನ್ಸರ್ ರೋಗಿಗಳ ಚಿಕಿತ್ಸೆ, ಸಾವಿರದಷ್ಟು ರೋಗಿಗಳಿಗೆ ಕಿಮೋ ಆಗುತ್ತಿತ್ತು. ಇಷ್ಟೆಲ್ಲ ರೋಗಿಗಳಿಗೆ ಕ್ಯಾನ್ಸರ್ ಚಿಕಿತ್ಸೆ ಲಭ್ಯವಾಗುತ್ತಿದ್ದರೂ ಬಡ- ಮಧ್ಯಮ ವರ್ಗದ ಜನರನ್ನ ಸೂಕ್ಷ್ಮವಾಗಿ ತಪಾಸಣೆ ನಡೆಸಿ, ಅವರಿಗೆ ಕ್ಯಾನ್ಸರ್‌ನ ತಿಳುವಳಿಕೆ ಮೂಡಿಸಿ ಗುಣಪಡಿಸಲು ಅಲ್ಲಿನ ವೈದ್ಯರುಗಳಿಗೆ ಸಮಯದ ಅಭಾವ ಕಾಡುತ್ತಿತ್ತು. ಹೀಗಾಗಿ ಈ ವೈದ್ಯ ದಂಪತಿ ಬಡ- ಮಧ್ಯಮ ವರ್ಗದವರಿಗೂ ಕ್ಯಾನ್ಸರ್‌ಗೆ ಉತ್ತಮ ಚಿಕಿತ್ಸೆ ದೊರಕಬೇಕು, ಅವರು ಕೂಡ ಕ್ಯಾನ್ಸರ್ ಮುಕ್ತರಾಗಿ ಸಮಾಜದಲ್ಲಿ ಎಲ್ಲರಂತೆ ಬದುಕುವಂತಾಗಬೇಕೆಂಬ ಮಹಾದಾಸೆ ಹೊಂದಿದ್ದರು.
ಜಿಸಿಆರ್‌ಐನಲ್ಲಿ ಕರ್ತವ್ಯದಿಂದ ಬಿಡುಗಡೆ ಹೊಂದಿದ ಬಳಿಕ ಡಾ.ಅಜಯ್‌ಕುಮಾರ್ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಗೆ ಸೇರಿಕೊಂಡರು. ಇಲ್ಲಿಗೆ ಬಂದಾಗ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಘನಗಡ್ಡೆ ಮತ್ತು ರಕ್ತ ಕ್ಯಾನ್ಸರ್, ಕಿಮೋಥೆರಪಿ, ಇಮ್ಯುನೋಥೆರಪಿ ಹಾಗೂ ಅಣ್ವಿಕ ಚಿಕಿತ್ಸೆಯಲ್ಲಿ ತಜ್ಞರಾಗಿದ್ದ ಡಾ.ರಾಮನಾಥ ಶೆಣೈ ಡಾ.ಅಜಯ್‌ಕುಮಾರ್ ಅವರಿಗೆ ಜೊತೆಯಾದರು. ಈ ಮೂವರಿಗೆ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿವಿಜ್ಞಾನ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ, ತಲೆ ಮತ್ತು ಕುತ್ತಿಗೆ ಗಡ್ಡೆ, ಮಿದುಳು ಗಡ್ಡೆ, ಸ್ತ್ರೀರೋಗ ಕ್ಯಾನ್ಸರ್, ಬ್ರಾಕಿಥೆರಪಿ, ನೋವು ಮತ್ತು ಉಪಶಮನ ಆರೈಕೆಯ ತಜ್ಞರಾಗಿದ್ದ ಡಾ.ಕೃಷ್ಣರಾಜ್ ಎಚ್.ಕೆ., ಟಾಟಾ ಕ್ಯಾನ್ಸರ್ ಸಂಸ್ಥೆಯ ಮಾಜಿ ತಜ್ಞ, ಪ್ಲಾಸ್ಟಿಕ್, ಸೌಂದರ್ಯ ಮತ್ತು ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸಾ ತಜ್ಞ ಡಾ.ಗೌರವ್ ಬಿ.ಶೆಟ್ಟಿ ಜೊತೆಯಾಗಿ, ಐವರೂ ಸೇರಿ ಆರು ತಿಂಗಳ ಹಿಂದೆ ಆರಂಭಿಸಿದ ತಂಡವೇ ಈ ‘ಕ್ಯಾನ್ ವಿನ್’.
ಬಡ ರೋಗಿಗಳಿಗೆ ನೆರವು: ಈ ‘ಕ್ಯಾನ್ ವಿನ್’ನ ಉದ್ದೇಶ ಬಡ- ಮಧ್ಯಮ ವರ್ಗದವರಿಗೆ ಅತಿ ಕಡಿಮೆ ಅಥವಾ ಸಾಧ್ಯವಾದಲ್ಲಿ ಉಚಿತವಾಗಿ ಕ್ಯಾನ್ಸರ್ ಚಿಕಿತ್ಸೆ ಕೊಡಿಸುವುದಾಗಿದೆ. ಇದಕ್ಕಾಗಿ ಹಲವಾರು ಸಂಘ- ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡಿರುವ ತಂಡ, ರಾಜ್ಯದ ಯಾವುದೇ ಮೂಲೆಯಿಂದ ಕರೆಮಾಡುವ ಕ್ಯಾನ್ಸರ್ ರೋಗಿಗಳಿಗೂ ಎಂಥದ್ದೇ ಪರಿಸ್ಥಿತಿಯಲ್ಲೂ ನೆರವು ನೀಡುವ ಮೂಲಕ ಮೆಚ್ಚುಗೆಗಳಿಸುತ್ತಿದೆ.