ಶಿರಸಿ: ಜಿಲ್ಲೆಯಲ್ಲಿ ತೋಟಗಾರಿಕೆ ಮಹತ್ವದ ಬಗ್ಗೆ ರೈತ ಸಮದಾಯಕ್ಕೆ ತೋಟಗಾರಿಕೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ ಪ್ರೋತ್ಸಾಹಿಸುವ ಸಲುವಾಗಿ ಫೆ.18 ರಿಂದ ಜಿಲ್ಲಾಮಟ್ಟದ ತೋಟಗಾರಿಕೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ತೋಟಗಾರಿಕಾ ಉಪ ನಿರ್ದೇಶಕ ಡಾ. ಬಿ ಪಿ ಸತೀಶ್ ಹೇಳಿದರು.
ಇಲ್ಲಿನ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾತ್ರ ಬೆಳೆಯುವ ಬೆಳೆಗಳ ಪ್ರದರ್ಶನ ನಡೆಯಲಿದೆ. ರೈತರನ್ನು ಮತ್ತು ಸಾರ್ವಜನಿಕರನ್ನು ಆಕರ್ಷಿಸಲು 36 ಕಿಂತ ಹೆಚ್ಚು ವಿವಿಧ ಜಾತಿಯ ಹೂವಿನ ಗಿಡಗಳನ್ನು ಕಚೇರಿ ಆವರಣದ ಸುತ್ತ ನಾಟಿ ಮಾಡಿ ಪೋಷಿಸಲಾಗಿದ್ದು ಇವುಗಳ ಪ್ರದರ್ಶನವೂ ನಡೆಯಲಿದೆ. ಈ ಜೊತೆಗೆ ಸೆಲ್ಫಿ ಪಾಯಿಂಟ್, ಪುಷ್ಪ ಜಲಪಾತ ಈ ಬಾರಿಯ ಫಲ ಪುಷ್ಪ ಪ್ರದರ್ಶನವ ವಿಶೇಷವಾಗಿರಲಿದೆ ಎಂದರು.
ಅಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಉಪಸ್ಥಿತಿ ಇರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ವಹಿಸಿಲಿದ್ದಾರೆ ಎಂದರು.
ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ತೋಟಗಾರಿಕಾ ಆವರಣದಲ್ಲಿ ನಾಟಿ ಮಾಡಲಾಗಿದ್ದು 2 ತಿಂಗಳಿಂದ ಪೋಷಿಸಿ ಬೆಳೆಸಲಾಗಿದೆ. ನಮ್ಮ ಶಿರಸಿ ನಮ್ಮ ಹೆಮ್ಮೆ ವರ್ಟಿಕಲ್ ಗಾರ್ಡನ್ ಮಾದರಿಗಳು, ಹೂವಿನಿಂದ ಅಣಬೆಕೊಡೆಗಳು, ಸೆಲ್ಫಿ ಸರ್ಕಲ್, ಹಸಿರು ಕಂಪನ, ಪರ್ಣ ಕುಟೀರ, ಪವರ್ ಸ್ಟಾರ್ ಗೆ ಸಿರಿ ನಮನ, ತರಕಾರಿಗಳಿಂದ ರಂಗೋಲಿ, ಜಿ-20 ಮತ್ತು ಆಜಾದಿಕಾ ಅಮೃತ ಮಹೋತ್ಸವ ಮಾದರಿಗಳು, ಹೈಡ್ರೊಪೋನಿಕ್, ಪುಷ್ಪಪಾತ್ರ, ತಾವರೆಕೊಳ, ಒಳಾಂಗಣ ಸಸ್ಯಗಳ ವಿನ್ಯಾಸ, ರೈತರು ಬೆಳೆದ ಫಲ ಪುಷ್ಪಗಳ ಪ್ರದರ್ಶನ ಹೂವಿನ ಜೋಡಣೆ, ಉದ್ಯಾನಗಳ ಮಾದರಿಗಳು, ತರಕಾರಿ ಪ್ರಾತ್ಯಕ್ಷಿಕೆ ಇರಲಿದೆ ಎಂದರು.
ಜಿಲ್ಲೆಯ ವಿವಿಧ ತಾಲೂಕಿನಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಉತ್ತಮಪ್ರದರ್ಶಿಕೆಗಳು ಅಂದರೆ ಹಣು, ತರಕಾರಿ, ಹೂವಿನ ಬೆಳೆಗಳು, ಸಾಂಬಾರು ಬೆಳೆಗಳು, ಸಂಸ್ಕರಣಾ ಪದಾರ್ಥಗಳ ಪ್ರದರ್ಶನ ಏರ್ಪಡಿಸಲಾಗುವುದು ಹಾಗೂ 70 ಮಳಿಗೆಗಳನ್ನು ತೆರೆಯಲಾಗುವುದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗವಾಗುವ ಯಂತ್ರೋಪಕರಣಗಳ ಪ್ರದರ್ಶನ, ಕೀಟ ಮತ್ತು ಮತ್ತು ರೋಗಗಳ ನಿಯಂತ್ರಣಕ್ಕೆ ಸಾವಯವ ಉತ್ಪನ್ನಗಳ ಬಳಕೆಸಸ್ಯಾಗಾರಗಳ ಮಳಿಗೆ, ಸಂಸ್ಕರಿಸಿದ ಪದಾರ್ಥಗಳ ಮಳಿಗೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಪ್ರದರ್ಶನ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕಾ ಹಿರಿಯ ಉಪನಿರ್ದೇಶಕ ಸತೀಶ ಹೆಗಡೆ, ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ, ತೋಟಗಾರಿಕಾ ಉಪ ನಿರ್ದೇಶಕ ಗಣೇಶ ಹೆಗಡೆ ಇದ್ದರು.