ಶಿರಸಿ: ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಪ್ರಯುಕ್ತ ಅಖಿಲ ಭಾರತ ಹಿಂದೂ ಮಹಾಸಭಾದಿಂದ ನಗರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಫೆ.28ರಂದು ನಡೆಯಲಿದೆ ಎಂದು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಪೈ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದ ಅವರು, ಮತಾಂತರ, ಲವ್ ಜಿಹಾದ್, ಗೋ ಹತ್ಯೆ, ಲ್ಯಾಂಡ್ ಜಿಹಾದ್, ಭಯೋತ್ಪಾದನೆಗಳೆಂಬ ವಿದೇಶಿ ಪ್ರೇರಿತ ಆಕ್ರಮಣಗಳಿಂದ ಧರ್ಮ ರಕ್ಷಣೆ ಮಾಡಲು ಜನ ಜಾಗ್ರತಿಗಾಗಿ ಕಾರ್ಯಕ್ರಮ ಸಂಘಟಿಸಲಾಗಿದೆ. ನಗರದ ವಿಕಾಸಾಶ್ರಮ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೆ. 25 ಕ್ಕೆ ಬೈಕ್ ರ್ಯಾಲಿ ನಡೆಯಲಿದೆ. ಫೆ.28ಕ್ಕೆ ಸಂಜೆ 4ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಮಲೇಶ ಮಹಾರಾಜ, ಹೈದ್ರಾಬಾದ್ ಛತ್ರಪತಿ ಶಿವಾಜಿ ಯುವ ಸೇವೆ ಸಂಸ್ಥಾಪಕ ಬೈಲೂರು ಯೋಗೇಶ ಪ್ರಭು, ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ ಉಪಸ್ಥಿತರಿರುವರು. ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ದಿಕ್ಸೂಚಿ ಭಾಷಣ ಮಾಡುವರು ಎಂದರು.
ಹಿಂದೂ ಕಾರ್ಯಕರ್ತರ ಮತಗಳಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಬೇಕಿರುವುದು ಬಿಜೆಪಿ ಕರ್ತವ್ಯ. ಅದನ್ನು ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಮಾಡ ಕಲಿಸಲಿದ್ದಾರೆ ಎಂದರು.
ಸಂಘಟನೆ ಪದಾಧಿಕಾರಿಗಳಾದ ಗೋಪಾಲ ದೇವಾಡಿಗ, ಸತೀಶ ಕುಮಟಾರ, ಪ್ರಕಾಶ ಸಾಲೇರ, ನರಸಿಂಹ ಅಬ್ರಿ, ಪ್ರದೀಪ, ಲಕ್ಷ್ಮಣ ದೇವಾಡಿಗ ಇತರರಿದ್ದರು.