Slide
Slide
Slide
previous arrow
next arrow

ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಶಶಿಧರ ಹೆಗಡೆ ನಂದಿಕಲ್‌ ಭಾಜನ

300x250 AD

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಶಶಿಧರ ಹೆಗಡೆ ನಂದಿಕಲ್ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಶಿಧರ ಹೆಗಡೆ, ‘ವಿಜಯ ಕರ್ನಾಟಕ’ ಪತ್ರಿಕೆಯ ಸಹಾಯಕ ಸಂಪಾದಕ ಮತ್ತು ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥರಾಗಿದ್ದಾರೆ. ರಾಜಧಾನಿ ಬೆಂಗಳೂರು ಇವರ ಕಾರ್ಯಕ್ಷೇತ್ರವಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದು ಬಂದಿರುವ ಶಶಿಧರ ಹೆಗಡೆ ನಂದಿಕಲ್ ಪ್ರಸ್ತುತ ವಸ್ತುನಿಷ್ಠ, ನಿಖರ ಮತ್ತು ಪ್ರೌಢ ಒಳನೋಟ ಹೊಂದಿರುವ ರಾಜಕೀಯ ವಿಶ್ಲೇಷಕರು. ‘ವಿಕ’ದಲ್ಲಿ ಪ್ರತಿ ಭಾನುವಾರ ಇವರ ‘ರಾಜ್ಯಕಾರಣ’ ಅಂಕಣ ಪ್ರಕಟವಾಗುತ್ತಿದ್ದು, ಇದು ವ್ಯಾಪಕ ಚರ್ಚೆಗೊಳಗಾಗುತ್ತಿರುವ ರಾಜಕೀಯ ಅಂಕಣವಾಗಿದೆ.

ಬೆಂಗಳೂರಿನಲ್ಲಿ ವರದಿಗಾರಿಕೆಯಲ್ಲಿ ಎರಡು ದಶಕದ ಅನುಭವ ಹೊಂದಿರುವ ಶಶಿಧರ ಹೆಗಡೆ ಎಲ್ಲ ರಾಜಕೀಯ ಪಕ್ಷಗಳ ಬೀಟ್ ಕವರ್ ಮಾಡಿದ ಮತ್ತು ಅದರಲ್ಲಿ ಪರಿಣಿತಿಯಿರುವ ಪ್ರಮುಖರಲ್ಲಿ ಒಬ್ಬರು. ಜತೆಗೆ ಸಚಿವಾಲಯದ ವರದಿಗಾರಿಕೆಯಲ್ಲಿ ಇವರಿಗೆ ವಿಶೇಷ ಹೆಸರು ಇದೆ.

ಅಂತಾರಾಜ್ಯ ಜಲ ವಿವಾದಗಳ ಕುರಿತು ಶಶಿಧರ ಹೆಗಡೆ ಹಲವು ಅಧ್ಯಯನಪೂರ್ಣ ವರದಿ ಬರೆದಿದ್ದಾರೆ. ಕೃಷ್ಣಾ, ಕಾವೇರಿ, ಮಹದಾಯಿ ಜಲ ವಿವಾದ, ನ್ಯಾಯಾಧಿಕರಣಗಳ ತೀರ್ಪಿನ ಬಗ್ಗೆ ಅಂಕಿ, ಅಂಶ ಸಹಿತ ಕರಾರುವಾಕ್ಕಾಗಿ ಮಾತನಾಡಬಲ್ಲರು.

300x250 AD

ಜತೆಗೆ ಶಿಕ್ಷಣ, ಇಂಧನ, ಗ್ರಾಮೀಣಾಭಿವೃದ್ಧಿ, ಕೃಷಿ, ಮೂಲಸೌಕರ್ಯ ಇಲಾಖೆಗಳಿಗೆ ಸಂಬಂಧಿಸಿ ಅನೇಕ ಗಮನ ಸೆಳೆಯುವ ಲೇಖನ ಬರೆದಿದ್ದಾರೆ. ಸಿಇಟಿ ಸುಧಾರಣೆಯಲ್ಲಿ ಇವರ ವರದಿಗಳ ಪಾತ್ರವಿದೆ. ಬಜೆಟ್ ಸಂಬಂಧಿತವಾಗಿ ಹಣಕಾಸು ಇಲಾಖೆಯನ್ನು ಫಾಲೋ ಮಾಡುವ ವಿರಳರಲ್ಲಿ ಇವರೂ ಒಬ್ಬರು. ರಾಜ್ಯದ ಅಭಿವೃದ್ಧಿಯ ಅಸಮತೋಲನದ ಬಗ್ಗೆ ಹಲವು ಬಾರಿ ಬರೆದಿದ್ದಾರೆ. ದಕ್ಷಿಣ ಮತ್ತು ಉತ್ತರ ಕರ್ನಾಟಕದ ನಡುವೆ ಅಭಿವೃದ್ಧಿಯಲ್ಲಿ ಬಹಳ ಅಂತರ ಇರುವ ಬಗ್ಗೆ ಅಧ್ಯಯನಪೂರ್ಣ ವರದಿ ಬರೆದಿದ್ದಾರೆ. ಯಕ್ಷಗಾನ ಕೂಡ ಇವರ ವಿಶೇಷ ಆಸಕ್ತಿಯ ಕ್ಷೇತ್ರ.

ಶಶಿಧರ ಹೆಗಡೆ ನಂದಿಕಲ್ ವರದಿಗಳು ವಿಧಾನಮಂಡಲದಲ್ಲಿ ಪ್ರತಿಧ್ವನಿಸಿವೆ. ರಾಜ್ಯದ ಭೌಗೋಳಿಕತೆ, ಆರ್ಥಿಕತೆ, ಪ್ರತಿ ಜಿಲ್ಲೆಯ ವೈಶಿಷ್ಟ್ಯ, ಜನಸಂಸ್ಕೃತಿ ಬಗ್ಗೆ ಬೆರಗಿನಿಂದಲೇ ಮಾಹಿತಿ ಕಲೆ ಹಾಕುವುದು ಇವರ ಅಭ್ಯಾಸ. ರಾಜ್ಯಾದ್ಯಂತ ಪ್ರವಾಸ ಮಾಡಿ ನೈಜ ಚಿತ್ರಣದ ಬಗ್ಗೆಯೂ ತಿಳಿದುಕೊಂಡಿದ್ದಾರೆ.

ಮೂಲತಃ ಉತ್ತರ ಕನ್ನಡದವರಾದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಬಳಿಕ ಮೈಸೂರಿನಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ನಂತರ ಕೆಲಕಾಲ ಬೆಳಗಾವಿಯ ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿ,
ಕಳೆದ 20 ವರ್ಷದಿಂದ ‘ವಿಕ’ದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಉತ್ತರ ಕನ್ನಡದ ಪ್ರತಿಭೆಯೊಂದು ಕನ್ನಡದ ರಾಜ್ಯ ಮಟ್ಟದ ಪ್ರಮುಖ ಹಾಗೂ ಅತಿ ಹೆಚ್ಚು ಓದುಗರನ್ನು ಹೊಂದಿರುವ ದೈನಿಕದಲ್ಲಿ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವುದು ಇದೇ ಮೊದಲು.

Share This
300x250 AD
300x250 AD
300x250 AD
Back to top