ಶಿರಸಿ : ಭಾರತವು ಇತಿಹಾಸವುಳ್ಳ ಸಮಾಜಗಳ ನಾಡಾಗಿದ್ದು, ಪರಕೀಯರ ಆಳ್ವಿಕೆಯಿಂದ ವಿನಾಶದ ಅಂಚಿನಲ್ಲಿದ್ದ ಸಂಸ್ಕೃತಿ ಸಂಸ್ಕಾರವನ್ನು ಇಲ್ಲಿನ ದೈವೀಶಕ್ತಿಯ ಕಾರಣದಿಂದ ಉಳಿಸಿ ಬೆಳೆಸಲು ಸಹಾಯವಾಗಿದೆ. ಇಲ್ಲಿ ಸಾವಿರಾರು ವರ್ಷಗಳ ಸಾಂಸ್ಕೃತಿಕ ಹಿನ್ನೆಲೆಯಿದ್ದು ಇದಕ್ಕೆ ದೇವರ ಮೇಲಿನ ನಂಬಿಕೆಗಳೇ ಕಾರಣವಾಗಿವೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ತಾಲೂಕಿನ ಮಳಲಿ ಶ್ರೀ ಈಶ್ವರ ವೀರಭದ್ರ ದೇವಸ್ಥಾನದ 21 ನೇ ವಾರ್ಷಿಕ ಸಮಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಯ-ಭಕ್ತಿ ಎರಡನ್ನೂ ನಮ್ಮಲ್ಲಿ ಮೂಡಿಸುವುದು ದೈವಶಕ್ತಿ, ನಾವು ತಪ್ಪು ದಾರಿಯಲ್ಲಿ, ಸಾಗುವಾಗ ನಾವು ಆರಾಧಿಸುವ ದೈವಗಳು ನಮಗೆ ಎಚ್ಚರಿಗೆ ನೀಡಿ ನಮ್ಮನ್ನು ಸರಿದಾರಿಗೆ ತೋರಿಸುವ ಶಕ್ತಿಗಳಾಗುತ್ತವೆ. ಜನನಿದಾತೆಯನ್ನು ಮಕ್ಕಳು, ಮೊಮ್ಮಕ್ಕಳು ಮಮ್ಮೀ ಎಂದು ಕರೆಸಿಕೊಳ್ಳುವ ವಿಚಾರಕ್ಕೆ ತೆರೆಯೆಳೆದು ಅಮ್ಮಾ ಎನ್ನುವ ಸ್ವಾದಿಷ್ಟಕರ ಶಬ್ದಕ್ಕೆ ಪ್ರೋತ್ಸಾಹಿಸುವ ಅವಶ್ಯಕತೆ ತಾಯಂದಿರದ್ದಾದಾಗ ಸಂಸ್ಕೃತಿಗಳು ಸುಸಂಸ್ಕಾರಯುತ ಆಗಬಲ್ಲವು. ವೈಜ್ಞಾನಿಕ ಅದ್ಭುತ, ಸಾಧನೆಗಳಿಂದ ಪದ್ಧತಿಗಳು ವಿನಾಶದತ್ತ ವಾಲುತ್ತಿರುವುದು ಸಲ್ಲದು. ಇದರಿಂದಲೇ ನಮ್ಮ ನಂಬಿಕೆಗಳು ಮಾಯವಾಗುತ್ತಿವೆ. ಇದನ್ನೆಲ್ಲಾ ತಡೆಯುವಲ್ಲಿ ಇಂತಹ ಉತ್ಸವಗಳು ಪೂರಕವಾಗಿವೆ. ಈ ದೇಶದ ಸಂಸ್ಕೃತಿಯನ್ನು ನಮ್ಮ ಸ್ತ್ರೀಕುಲವೇ ಉಳಿಸಿದೆ ಎಂದು ಹೇಳಿದರು. ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸಹಾಯ ಬೇಕಾದಲ್ಲಿ ನನ್ನನ್ನು ಯಾವತ್ತು ಸಂಪರ್ಕಿಸಬಹುದು ಎಂದು ಹೇಳಿದರು.
ಶ್ರೀ ಶಿವಲಿಂಗ ಸ್ವಾಮೀಜಿ ಬಣದ ಮಠ, ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ನಿಶ್ಚಲಾನಂದನಾಥ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಈಶ್ವರಯ್ಯ ಶಂಕರ್ ಗೌಡರ, ತಾರೆಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಎ.ಪಿ.ಎಮ್.ಸಿ. ಅಧ್ಯಕ್ಷ ಪ್ರಶಾಂತ್ ಗೌಡರ,ಕಾಂಗ್ರೆಸ್ ಧುರೀಣ ಭೀಮಣ್ಣ ನಾಯ್ಕ , ಗಜಾನನ ಹೆಗಡೆ, ಅರುಣ್ ಗೌಡ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು